KOPPAL DIST COMPLETE INFORMATION AND NEWS

ಕನ್ನಡನೆಟ್

ಒಡಲ ಹಾಡು

ವಿಠ್ಠಪ್ಪ ಗೋರಂಟ್ಲಿ

ಜಿಲ್ಲೆಯ ಹಿರಿಯ ಪತ್ರಕರ್ತ, ಸಾಹಿತಿ

         ಭಾಗ್ಯನಗರದ ಮೂಲ ಗ್ರಾಮವಾದ ಕಾತರಕಿ ಸ್ವಾತಂತ್ರ್ಯ ಪೂರ್ವದಲ್ಲಿ ಕೊಪ್ಪಳ ತಾಲೂಕಿನಲ್ಲಿಯೇ ಪ್ರಮುಖ ಪಟ್ಟಣವಾಗಿತ್ತು. ಕಾತರಕಿಯ ಸಂತೆ ಸುತ್ತೆಲ್ಲ ಗ್ರಾಮಗಳಿಗೆ ಪ್ರಸಿದ್ಧವಾಗಿತ್ತು. ಇಲ್ಲಿ ನೇಕಾರಿಕೋದ್ಯಮ ಮತ್ತು ಒಕ್ಕಲುತನ ಎರಡೂ ಉದ್ಯೋಗದ ಜನರಿದ್ದರು. ಇವರಲ್ಲಿ ಹೋರಾಟದ ಮನೋಭಾವವಿತ್ತು. ಹಾಗೆಯೆ ಜನಪದ ಸಾಹಿತ್ಯವನ್ನು ಸಾಮಾನ್ಯರು ಕೂಡಾ ಸರಳವಾಗಿ ರಚಿಸಿ ಸರಾಗವಾಗಿ ಹಾಡಬಲ್ಲವರಾಗಿದ್ದರು.

         ಆಗಿನ ಕಾಲದಲ್ಲಿ ಮೊಹರಂ ಅವಾ ಅಲಾಹಿ ಹಾಡುಗಳು ತುಂಬ ಪ್ರಸಿದ್ಧವಾಗಿದ್ದವು. ಬೆಳಗಾಗುವವರೆಗೆ ಈ ಹಾಡುಗಳನ್ನು ವಾದಿ ಬೀದಿಯಾಗಿ ಹಾಡುತ್ತಿದ್ದರು. ಇದರಲ್ಲಿ ಸವಾಲಿನ ಹಾಡುಗಳು, ಕವಾಲಿ ಹಾಡುಗಳು, ರಿವಾಯ್ತ ಪದಗಳು ಮತ್ತು ಕಥನ ಕಾವ್ಯಗಳಿರುತ್ತಿದ್ದವು. ಸುಮಧುರ ಕಂಠದಿಂದ ರಾಗಬದ್ಧವಾಗಿ ಹಾಡುತ್ತ ಕೇಳುವವರ ಹೃದಯಕ್ಕೆ ತಟ್ಟುತ್ತಿದ್ದವು.

         ತಂಡ ತಂಡವಾಗಿ ಈ ಹಾಡುಗಳನ್ನು ಹಾಡುವುದು ವಾಡಿಕೆ. ಒಂದೊಂದು ಕಡೆ ಹತ್ತಾರು ತಂಡಗಳು ಸೇರಿ ಪಾಲಿಯ ಪ್ರಕಾರ ಹಾಡುಗಳನ್ನು ಹಂಚಿಕೊಳ್ಳುತ್ತಿದ್ದರು. ಕಾಳಿಗೆ ಗೆಜ್ಜೆ ಕಟ್ಟಿಕೊಂಡು ಹಲಗೆಯ ತಾಳಕ್ಕೆ ಕುಣಿಯುತ್ತ ಹಾಡು ಹೇಳುತ್ತ ಬೀದಿಯಲ್ಲಿ ಮಸೀದಿಗೆ ಹೊರಟು ಸಕ್ಕರೆ ಓದಿಸಿಕೊಂಡು ಬರುವ ದೃಶ್ಯ ಮಕ್ಕಳ ಮನಸ್ಸಿನಲ್ಲಿ ಗಾಢ ಪ್ರಭಾವ ಬೀರುತ್ತಿತ್ತು. ಕಾತರಕಿಯಲ್ಲಿ ಈ ರೀತಿ ತಂಡಗಳು ಹನುಮಂತಪ್ಪ ತಟ್ಟಿ, ಫಕೀರಸಾಬ ಭೈರಾಪೂರ ಮುಂತಾದವಿದ್ದವು. ಇವರಿಂದ ಹುಲಗಜ್ಜ ತಂಬ್ರಳ್ಳಿ, ರಾಮಣ್ಣ ಹ್ಯಾಟಿ, ರಾಮಣ್ಣ ಬಾಚಿನಳ್ಳಿ, ಶಿರಸಪ್ಪ ಹ್ಯಾಟಿ  ಹೀಗೆ ಅನೇಕರು ಕಲಿತವರಿದ್ದಾರೆ.

         ಆದರೆ ಗ್ರಾಮ ತುಂಗಭದ್ರಾ ಅಣೆಕಟ್ಟಿನ ಕೆಲಸ ಪೂರ್ಣಗೊಂಡ ಬಳಿಕ ಮುಳುಗಡೆಗೊಂಡು ರೈತಾಪಿ ಜನರು ಹೊಸ ಕಾತರಕಿ ನಿರ್ಮಿಸಿಕೊಂಡು ಜಲಾಶಯದ ದಂಡೆಗೆ ವಾಸವಾದರೆ, ನೇಕಾರಿಕೆ ಉದ್ಯೋಗ ಅವಲಂಭಿಸಿದವರೆಲ್ಲ ಕೊಪ್ಪಳ ಸಮೀಪದಲ್ಲಿ ಹಿರೇಹಳ್ಳದ ನೀರು ಮತ್ತು ರೈಲಿನ ಸೌಕರ್ಯಕ್ಕಾಗಿ ಭಾಗ್ಯನಗರ ಎನ್ನುವ ಈ ನೂತನ ಗ್ರಾಮ ನಿರ್ಮಿಸಿಕೊಂಡು ವಾಸವಾದರು. ಆದರೆ ಕ್ರಮೇಣ ಸಿನಿಮಾ, ರೆಡಿಯೋ, ಟಿವಿ ಹಾವಳಿಂದ ಈಗ ಮೊಹರಂ ಹಾಡುಗಳನ್ನು ಕಲಿಯುವವರಿಲ್ಲ ಮತ್ತು ಕೇಳುವವರಿಲ್ಲ ಎನ್ನುವಂತಾಗಿದೆ.

         ಬರೆದಿಟ್ಟುಕೊಂಡಿರುವ ಎಷ್ಟೋ ಹಾಡುಗಳು ಮುದ್ರಣವಾಗದೆ ಅಳಿಸಿ ಹೋಗುತ್ತಿವೆ. ಹಾಡುವವರೂ ಅವುಗಳನ್ನು ಮರೆಯತೊಡಗಿದ್ದಾರೆ. ಅಕ್ಕಾಗಿ ಅದನ್ನು ನೆನಪಿಸಿಕೊಳ್ಳುವ ಮತ್ತು ಆಗಿನ ಕಾತರಕಿಯ ಜನರ ಮನೋಭಾವ, ಹೋರಾಟದ ಗಟ್ಟಿತನ ಚಿತ್ರಿಸಿರುವ ಅಪರೂಪದ ರಿವಾಯತ್ ಪದವೊಂದು ಇಲ್ಲಿದೆ. ಇದನ್ನು ಆಗಿನ ಕಾಲದಲ್ಲಿ ನಿಜಾಮನ ಆಡಳಿತವಿದ್ದದ್ದರಿಂದ ಉರ್ದು ಪ್ರಭಾವ ದಟ್ಟವಾಗಿತ್ತಾದರೂ ಜನಜೀವನದಲ್ಲಿ ಕನ್ನಡ ಹೇಗೆ ಹಾಸುಹೊಕ್ಕಾಗಿತ್ತು ಮತ್ತು ಅದನ್ನು ಆಗಿನ ಮುಸ್ಲೀಮರೂ ಸಹಿತ ಹಾಡು ರಚಿಸುವಷ್ಟರ ಮಟ್ಟಿಗೆ ಬಳಕೆಯಲ್ಲಿಟ್ಟುಕೊಂಡಿದ್ದರು ಎನ್ನುವುದಕ್ಕೆ ದಾಖಲೆಯಾಗಿದೆ. ಹುಸೇನಸಾಬ ಎನ್ನುವ ಆಶುಕವಿ ಇದನ್ನು ರಚಿಸಿದ್ದಾನೆ.

         ನೇಕಾರ ಜನದಲ್ಲಿ ಹೆಚ್ಚಾಗಿ ಹಿಂದುಳಿದವರೆ ಆಗಿರುವುದರಿಂದ ಕುಡಿಯುವುದು ತಿನ್ನುವುದು ಅವರ ಬದುಕಿನಲ್ಲಿ ಅನನ್ಯವಾಗಿ ಬೆರೆತಿರುತ್ತೆ. ಆಗಿನ ಕಾಲದಲ್ಲಿ ಹೆಂಡದ ಅಂಗಡಿಗಳು ಊರ ಹೊರಗಗೆ ಇರುತ್ತಿದ್ದವು. ಅವುಗಳನ್ನು ಕೆಲವು ಮಾಮಲೆದಾರರು ಗುತ್ತಿಗೆ ಹಿಡಿಯುತ್ತಿದ್ದರು. ಆಗ ಫಾರಸಿಯೊಬ್ಬ ಹೆಂಡದ ಮಾಮಲೆ ಹಿಡಿದು ಹೆಂಡದ ದರ ಹೆಚ್ಚಿಸಿದಾಗ ಕಾತರಕಿ ಗ್ರಾಮದ  ಜನ ಅದನ್ನು ಪ್ರತಿಭಟಿಸುತ್ತಾರೆ. ಅವರಿಗೆ ಹೆಂಡ ತಂದು ಮಾರಲಿಕ್ಕೆ ಅವಕಾಶ ಕೊಡುವುದಿಲ್ಲ ಮತ್ತು ಯಾರೂ ದರ ಕಡಿಮೆ ಮಾಡುವವರೆಗೆ ಕುಡಿಯಬಾರದೆಂದು ಕಟ್ಟಪ್ಪಣೆ ವಿಧಿಸುತ್ತಾರೆ. ಅದನ್ನು ಊರ ಜನ ಚಾಚೂ ತಪ್ಪದೆ ಪಾಲಿಸುವುದರಿಂದ ತಂದ ಹೆಂಡವನ್ನೆಲ್ಲ ಮಾರಾಟಗಾರರು ತಗ್ಗಿಗೆ ಸುರಿದು ಹೋಗುತ್ತಾರೆ. ಕೊನೆಗೆ ದೊಡ್ಡ ಹೊಡೆದಾಟವೇ ಆಗಿ ಆಗಿನ ಕಾಲದಲ್ಲಿ ರಾಯಚುರಿನಿಂದ ಪೊಲೀಸ್ ಪಡೆ ಬರುತ್ತೆ. ಆದರೂ ಗ್ರಾಮದ ಮುಖಂಡರು ತಮ್ಮ ಹಠ ಸಾಧಿಸುತ್ತಾರೆ. ಇದನ್ನೇ ಕವಿ ಈ ಹಾಡಿನಲ್ಲಿ ಹೇಳಿದ್ದಾನೆ. ರಾಗಬದ್ಧವಾಗಿ ಹಾಡಿದಾಗ ಇದರ ಪರಿಣಾಮ ಚೆನ್ನಾಗಿರುತ್ತದೆ. ಈಗಲೂ ಭಾಗ್ಯನಗರದ ಶಿರಸಪ್ಪ ಹ್ಯಾಟಿ ಮತ್ತು ಮಲ್ಲಪ್ಪ ಮಡಿವಾಲರ ತಂಡ ಇದನ್ನು ಹಾಡುತ್ತಾರೆ. ಇದರಿಂದ ಹಳೆಯ ಕಾತರಕಿಯ ಚಿತ್ರಣ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಇಲ್ಲಿ ದಾಖಲಿಸಲಾಗಿದೆ.

 

ರಿವಾಯ್ತ ಹಾಡು:

ಏನ್ಕಡಕ ಮಾಡಿದುಡಕ  ಹೇಳುವೆ ಮಜಕೂರ

ಮನಸಿಟ್ಟು ಮಡೀನಿ ಬಲ್ಲಿದ ವಿಸ್ತಾರ, ||ಪ||

ಹೈದರಾಬಾದ ಜಿಲ್ಲಾದೊಳಗಿನ ಕಾತರಕಿ ಶಾರಾ|

ಹೆಸರಾತೊ ತುಸು ಕೇಳ್ರಿ ಬಹಳಾ ದೂರ ದೂರಾ|

ಹಾಳ ಮಾಡ್ಯಾರ  ಬಾಳ ಮಂದಿ ಕೇಳಿರಿ ಹಿರಿಯಾರ ||೧||

 

ಚಂದದಿಂದ ಬಂದಿತ್ತು ಭವನಾಮ ಸಂವತ್ಸರ |

ಸಿಂದಿಮಾಮ್ಲೆ ಬಂದು ಹಿಡಿದನು ಪಾರ್‍ಸಿ ಮುಡದಾರ ||೨||

 

ಆಣೆಕೆಂಟು ದಾರಾಮು ಮಾರುವುದು ಕರಾರಾ |

ಹಿಂಗಂತ ತಂದಿಟ್ಟ ಮುದ್ರಿತದ ಸೇರಾ |

ಮುಂದ ಕೇಳರಿ ಚಂದದಿಂದ ಆಗುವ ಕುತಂತರ ||೩||

 

ಹೊಟ್ಟಿ ನಾಗಪ್ಪ ಯಟ್ಟಿ ಭೋಜಪ್ಪ ಕೂಡಿ ಇಬ್ಬರಾ |

ಪೇರಿ ಹೊಡಿಸ್ಯಾರ ಮೀರಿ ಬಂತು ಬರಬೇಕು ಎಲ್ಲಾರಾ ||೪||

 

ಕ್ಷತ್ರಿಜನರಾ ಪೈಕಿ ತುಳಜಾ ಭವಾನಿ ದೇವರಾ |

ಗುಡಿಗೋಗಿ ಕುಡ್ಯಾರೊ ಸರ್ವ ದೈವದವರಾ |

ಬೇಕಾದವರು ಬರಲೆಂದು ಕ್ಯಾಕಿ ಹೊಡಿಯುವರಾ ||೫||

 

ಹೆಂಡ ಕುಡುದು ಬಂದವರಿಗೆ ದಂಡ ಕರಾರ |

ಗಟ್ಟಿ ಮಾಡ್ಯಾರ ಎಂಟಾಣೆ ಕುಡಿ ಸರ್ವರಾ |

ಬಂದ್ ಮಾಡ್ಯಾರ ಸಿಂದಿ ಕುಡಿದಂಗ ಯಾರ್‍ಯಾರಾ ||೬||

 

ರಾಜಾ ಲೋಕ್ಯಾ ಮೊದಿನಾಕ್ಯಾ ಬೆನಕಲಿ ನಾಲ್ವರಾ |

ಗುಡ್ಲಾನೂರ ಹೆಂಡ ಲೂಟಿ ಮಾಡಿ ಕುಡಿದರಾ ||೭||

 

ಗೊಂಡಬಾಳಿಗೆ ಹೆಂಡ ಕುಡಿಯಾಕ ಹೋಗುವರು ಜನರಾ |

ಬಂಡಿ ತರುಬಿ ಹೆಂಡ ಲೂಟಿ ಮಾಡಿ ಕುಡಿದರಾ ||೮||

 

ಹ್ಯಾಟಿ ಹಳ್ಳಕ ಲೂಟಿ ಮಾಡಕ ಹೋಗುವರು ಜನರಾ |

ಬಂಡಿ ತರುಬಿ ಹೆಂಡ ಲೂಟಿ ಮಾಡಿ ಕುಡಿದರಾ |

ಸುತ್ತ ನಾಡಿನೊಳಗ ಇಂಥ ಕೆಲಸ ಮಾಡಿಲ್ಲ ಯಾರ್‍ಯಾರಾ ||೯||

 

ಹೊಸಹಳ್ಳಿ ಮುದ್ದಾಬಳ್ಳಿ ಲಾಚನಕೇರಿ ಊರಾ |

ಹೊಸಹಳ್ಳಿಗೆ ಹೋದ ಮಂದಿಗೆ ಪಾರ್‍ಸಿ ಮುಡದಾರಾ |

ಹಿಡಿದು ಹೊಡೆದು ಕಳದಾನೊ ನಮ್ಮ ಅಬರಾ |

ಎಂಥ ಕಷ್ಟ ತಂದಾನ್ರಿ ಶಂಭೂ ಶಂಕರಾ ||೧೦||

 

ಅಂದ ಯಲ್ಲಪ್ಪ ಬಂದ ಅಳುತಾ ಕೇಳಿರಿ ಎಲ್ಲಾರ |

ಹಿಡಿದು ಹೊಡೆದು ಕಳಾದರೋ ನಮ್ಮ ಅಬರಾ ||೧೧||

 

ಒಂದು ತಿಂಗಳ ಬಂದಾತೊ ಹೋಗಲಿಲ್ಲ ಯಾರ್‍ಯಾರ |

ಚಿಂತಿ ಮಾಡುತ ಕುಂತ ಪಾರ್‍ಸಿ ಹಾಕುತ ಉಸರಾ |

ಹೆಂಡ ತಂದು ದಿನ ತಗ್ಗಿಗೆ ಚಲ್ಲುವವರಾ ||೧೨||

 

ತಿಂಗಳಾಗಿಂದ ಮಂಗಳವಾರದ ಗೋಳ ಕೇಳರಿ ಜನರಾ |

ಬಂತು ಬಂಡಿ ನಿಂತು ಬಿಡಿಸಿ ಮಸ್ತಾನಿ ತೀವ್ರ ||೧೩||

 

ಲಾಡಸಾಬ ತುಡಗ ಮಾಡಿ ತಗಂಡಾನೊ ಸೇರಾ |

ತುಂಬಿಕೊಂಡು ಕುಡಿಲಿಕ್ಕ ನಿಂತಾನು ಚದುರಾ |

ಅಂದ ಮಸ್ತಾನಿ ನಿನ್ನದಾತೊ ಹೇಳಲಿಲ್ಲ ಯಾರ್‍ಯಾರ ||

 

ಸೇರ ತಿರಿವಿ ಮಾರಿಗೊಡದರ ಬಂತು ನೆತ್ತರಾ |

ಮಸ್ತಾನಿ ಓಡಿಹೋದ ಪಾರ್‍ಸಿ ಹತ್ತಿರಾ ||೧೫||

 

ಕೊಪ್ಪಳಕ ರಿಪೋರ್ಟ ಬರೆದ ಗೌಡ ಬಾದ್ದೂರ |

ಗಾಡಿ ಹೂಡಿ ಓಡಿ ಬಂತೊ ಕೊಪ್ಪಳ ಸರಕಾರ |

ಪಂಚನಾಮ ಮಾಡಿಕೊಂಡು ಹೋದರ ತೀವ್ರಾ ||೧೬||

 

ಪಾರ್‍ಸಿಗೆ ಕರಿಸ್ಯಾರೋ ಸರಕಾರದವರಾ |

ಕೊಡಿ ಸಾಕ್ಷಿ ಬಿಡೋದಿಲ್ಲ ಕಟ್ಲೆ ಮಾಡುವೆ ಜೋರಾ ||೧೭||

 

ಪೀರಾ ಸರ್ಕಲ್ ಮೋತಿ ಮಿಯಾ ಅಮಿನ ಪೊಲೀಸರಾ |

ಮೋತಿ ಮಿಯಾ ಕೇಳುತಾನ ಮಾಡಿ ಒಳ್ಳೆ ಜೋರಾ |

ಎಣಿಸಿಕೊಟ್ಟ ಏಳೆಂಟು ನೂರು ರೂಪಾ |

ಹಣ ಕಳಕೊಂಡ ಹೆಣ ಆದ ಪಾರ್‍ಸಿ ಮುಡದಾರ ||೧೮||

 

ಎದ್ದು ಬಂದ ಅಂದ ಮೋಟರ ಮಾಡ್ರಿ ತಯಾರ |

ರಾಯಚೂರಿಗೆ ಹೋದಾನು ಬರ್ ಬರಾ |

ಮರುದಿವಸ ಆರು ತಾಸಿಗೆ ಆದರು ತಯಾರಾ ||೧೯||

 

ಭೊಜಪ್ಪ ನಾಗಪ್ಪ ಸರ್ವ ದೈವದವರಾ |

ಮೋಟಾರ ಹತ್ತಿ ಬಂತು ರಾಯಚೂರ ಸರಕಾರ |

ವಿರಸರ್ಕಲ್ ಮೋತಿಮಿಯಾ ಅಮೀನ ಪೊಲೀಸರಾ |

ಹೆಂಡದ ನ್ಯಾಯಾ ಹಿಡಿದಾನೊ ಗೌಡ ಬಾದ್ದೂರಾ ||೨೦||

 

ರದ್ದು ಮಾಡಿದ ಬುದ್ಧಿವಂತ ಶೂರ ಸರದಾರಾ |

ಸುತ್ತ ನಾಡಿನೊಳಗೆ ಇಂತ ಕೆಲಸ ಮಾಡಿಲ್ಲ ಯಾರ್‍ಯಾರಾ |

ದಿಕ್ಕು ದೇಶಕ ಬೆಳಕಾತೊ ಕಾತರಕಿ ಶಾರಾ |

ಗರ್ದಿ ಕುಸುಮ ಪ್ಯಾಟಿಯೊಳಗ ಹುಸೇನಿ ಕವಿಗಾರ ||೨೧||

 

ತುಂಗಭದ್ರಾ ಅಣೆಕಟ್ಟೆಗೆ ಮುಳುಗಡೆಗೊಂಡ ಕಾತರಕಿಯ ದಾಖಲಾರ್ಹ ಅಪರೂಪದ ಅಲಾಹಿ ಹಾಡು