|
CONTACT US: kannadanet.com Karishma Digital studio jawahar road, Koppal-583 231 ಕರಿಷ್ಮಾ ಡಿಜಿಟಲ್ಸ್, ಜವಾಹರ ರಸ್ತೆ, ದುರ್ಗಮ್ಮ ಕಟ್ಟೆ ಹತ್ತಿರ ,ಕೊಪ್ಪಳ Phone: 9880257488 E-mail: kannadanet@gmail.com,sirajbisaralli@in.com |
|
ಮುಖಪುಟ ಪ್ರತಿಸ್ಪಂದನೆ ನಮ್ಮನ್ನು ಸಂಪರ್ಕಿಸಿ |
|
KOPPAL DIST COMPLETE INFORMATION AND NEWS |
|
ಕನ್ನಡನೆಟ್.ಕಾಂ |
|
Kannadanet.com |




|
Sri Gavisiddeshwarmat Koppal |
|
ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳ ಫೋಟೋಗಳು |
|
ಕೊಪ್ಪಳ ಹೈದರಾಬಾದ ಕರ್ನಾಟಕ ಪ್ರದೇಶದ ಪ್ರತಿಷ್ಠಿತ ನಗರ, ಇತಿಹಾಸ ಪ್ರಸಿದ- ಕೊಪ್ಪಳ ನಗರ ಸಾಂಸ್ಕೃತಿಕ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇತಿಹಾಸ ಪೂರ್ವ ಕಾಲದ ಅವಶೇಷಗಳು, ಇಂದ್ರಕೀಲ ಪರ್ವತ, ಅಶೋಕನ ಶಿಲಾಶಾಸನ, ಪಾಶ್ಚತ್ಯ ಇತಿಹಾಸ ತಜ್ಞರ ಪ್ರಶಂಸೆಗೆ ಪಾತ್ರವಾದ ನಿಸರ್ಗಸಹಜ ಬೆಟ್ಟ , ಕೋಟೆ, ಕಲ್ಗೋರಿಗಳು (ಡಾಲಮ) ಹಾಗೂ ಗವಿಚಿತ್ರಗಳು (ಕೇವ್ ಪೇಂಟಿಂಗ್) ಇತ್ಯಾದಿಗಳು ಕೊಪ್ಪಳದ ಭವ್ಯ ಇತಿಹಾಸ ಪರಂಪರೆಗೆ ಸಾಕ್ಷಿಯಾಗಿವೆ. ಸಾಹಿತ್ಯ , ಸಂಸ್ಕೃತಿ, ಕಲೆ, ಧಾರ್ಮಿಕ ಸಾಮರಸ್ಯ ಹಾಗೂ ಭಾವೈಕ್ಯತೆಗೆ ಹೆಸರಾಗಿದೆ. ಕೋಪಣತೀರ್ಥ, ಆದಿತೀರ್ಥ, ಮಹಾತೀರ್ಥ, ಕೊಪನಾಚಲ ಮುಂತಾದ ಹೆಸರುಗಳಿಂದ ಕೊಪ್ಪಳವನ್ನು ಕರೆದಿರುವುದು ಶಿಲಾಶಾಸನಗಳಿಂದ ಹಾಗೂ ಸಾಹಿತ್ಯ ಗ್ರಂಥಗಳಿಂದ ತಿಳಿದುಬರುತ್ತದೆ. ಕನ್ನಡದ ಪ್ರಮುಖ ಕವಿ ರನ್ನ ತನ್ನ ಕೃತಿಯಲ್ಲಿ ಆಶ್ರಯದಾತೆಯಾಗಿದ್ದ ಅತ್ತಿಮಬ್ಬೆಯನ್ನು ನೆಗಳ್ದ ಕೋಪಚಲದಂತೆ ಪವಿತ್ರ ಎಂದು ಬಣ್ಣಿಸಿದ್ದಾನೆ. ಕೊಪ್ಪಳ ಜೈನ ಧರ್ಮದ ಪ್ರಮುಖ ಕೇಂದ್ರವಾಗಿ ಜೈನ ಕಾಶಿ ಎಂದೇ ಪ್ರಸಿದಿ-ಯಾಗಿತ್ತು . ಇಲ್ಲಿ ಏಳುನೂರ ಎಪ್ಪತ್ತೆರಡು ಜಿನಾಲಯಗಳಿದ್ದವೆಂದು ಪ್ರತೀತಿ ಇದೆ. ಕುಮಾರಸೇನನೆಂಬ ಮುನಿ ಮುಳುಗುಂದದಲ್ಲಿ ತಪಸ್ಸನ್ನು ಆಚರಿಸಲು ತೃಪ್ತಿಕಾಣದೇ ಕೋಪಣಾಚಲಕ್ಕೆ ಬಂದು ಸಮಾಧಿಮರಣ ಪಡೆದನೆಂದು ಚಾವುಂಡರಾಯ ಪುರಾಣ ಹೇಳಿದೆ. ಕೊಪ್ಪಳ ನಾಡು, ನುಡಿ, ರಾಷ್ಟ್ರೀಯ ಹಾಗೂ ಮಾನವೀಯ ಕಾರಣಗಳಿಂದಾಗಿ ನ್ಯಾಯಯುತ ನಿಲುವನ್ನು ಬೆಂಬಲಿಸುವ ಸದಾ ಹೋರಾಟದ ಮಂಚೂಣಿಯಲ್ಲಿ ನಿಲ್ಲುವಂತಸ್ವಾಭಿಮಾನಿಗಳ ನೆಲೆಬೀಡಾಗಿದೆ. ಕನ್ನಡ ನಾಡಿನ ಪುಣ್ಯ ಭೂಮಿಯಲ್ಲಿ ತಪೋಭೂಮಿಯಾಗಿ ರಾರಾಜಿಸುತ್ತಿರುವ ಮಹಾಮಂದಿರ ಮಠಗಳಲ್ಲಿ ಕೊಪ್ಪಳ ಗವಿಮಠವೂ ಒಂದು. ಇದು ಅತ್ಯಂತ ಪುರಾತನ ಮಠವಾಗಿದೆ. ಇದು ಭಕ್ತಿ ಮುಕ್ತಿಯನ್ನು ಮೀರಿ ನಿಲ್ಲುವ ದೇವನಿಲಯವಾಗಿದೆ. ಕೊಪ್ಪಳ ನಗರದ ಪೂರ್ವ ಬೆಟ್ಟದ ಮಡಿಲಲ್ಲಿ ಕಂಗೊಳಿಸುವ ಸಂಸ್ಥಾನ ಶ್ರೀ ಗವಿಮಠ ಆಧ್ಯಾತ್ಮ ಸಿರಿಯ ಆಗರವಾಗಿದೆ. ಪೂಜ್ಯರ ತಪೋಬಲದ ಪವಿತ್ರತಾ ಣವಾಗಿದೆ. ತ್ರಿವಿಧ ದಾಸೋಹದ ಪುಣ್ಯಕ್ಷೇತ್ರವಾಗಿದೆ. ಸಾವಿರ ವರ್ಷಗಳ ಇತಿಹಾಸ ಹೊಂದಿದ ಶ್ರೀಮಠ ಅನ್ನ, ಅಕ್ಷರ ಹಾಗೂ ಆಧ್ಯಾತ್ಮ ಸಿರಿಯನ್ನು ನಾಡ ಜನತೆಗೆ ನಿರಂತರವಾಗಿ ಧಾರೆಯೆರೆಯುತ್ತಿರುವುದು ಇದರ ಪರಂಪರೆಯೇ ಆಗಿದೆ. ಶ್ರೀ ಗವಿಮಠದ ಪರಂಪರೆಯ ಪೀಠಾಧಿಪತಿಗಳು : ೧. ಪೂಜ್ಯಶ್ರೀ ರುದ್ರಮುನಿ ಮಹಾಸ್ವಾಮಿಗಳು ೨. ಪೂಜ್ಯಶ್ರೀ ಸಂಗನಬಸವ ಮಹಾಸ್ವಾಮಿಗಳು ೩. ಪೂಜ್ಯಶ್ರೀ ಶಿವಲಿಂಗ ಮಹಾಸ್ವಾಮಿಗಳು ೪. ಪೂಜ್ಯಶ್ರೀ ಚನ್ನವೀರ ಮಹಾಸ್ವಾಮಿಗಳು ೫. ಪೂಜ್ಯಶ್ರೀ ಕಾಶಿ ಕರಿಬಸವ ಮಹಾಸ್ವಾಮಿಗಳು ೬. ಪೂಜ್ಯಶ್ರೀ ಶಿವಲಿಂಗ ಮಹಾಸ್ವಾಮಿಗಳು ೭. ಪೂಜ್ಯಶ್ರೀ ಪುಟ್ಟ ಸುಚನ್ನವೀರ ಮಹಾಸ್ವಾಮಿಗಳು ೮. ಪೂಜ್ಯಶ್ರೀ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು ೯. ಪೂಜ್ಯಶ್ರೀ ಸಂಗನಬಸವ ಮಹಾಸ್ವಾಮಿಗಳು ೧೦. ಪೂಜ್ಯಶ್ರೀ ಚನ್ನಬಸವ ಮಹಾಸ್ವಾಮಿಗಳು ೧೧. ಪೂಜ್ಯಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ೧೨. ಪೂಜ್ಯಶ್ರೀ ಹಿರಿಶಾಂತವೀರ ಮಹಾಸ್ವಾಮಿಗಳು ೧೩. ಪೂಜ್ಯಶ್ರೀ ಶಿವಶಾಂತವೀರ ಮಹಾಸ್ವಾಮಿಗಳು ೧೪. ಪೂಜ್ಯಶ್ರೀ ಮರಿಶಾಂತವೀರ ಮಹಾಸ್ವಾಮಿಗಳು ೧೫. ಪೂಜ್ಯಶ್ರೀ ಶಿವಶಾಂತವೀರ ಮಹಾಸ್ವಾಮಿಗಳು ೧೬. ಪೂಜ್ಯಶ್ರೀ ಮರಿಶಾಂತವೀರ ಮಹಾಸ್ವಾಮಿಗಳು ೧೭. ಪೂಜ್ಯಶ್ರೀ ಶಿವಶಾಂತವೀರ ಮಹಾಸ್ವಾಮಿಗಳು ೧೮. ಪೂಜ್ಯಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಪೂಜ್ಯ ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು : ಹತ್ತು ಶತಮಾನಗಳ ಹಿಂದೆ ಕಾಶಿಯ ಜಂಗಮವಾಡಿಯಿಂದ ದಯಮಾಡಿಸಿದ ಕಾಶೀ ವಿಶ್ವನಾಥನ ಚಿತ್ಕಳೆಯ ಅವತಾರಿ ಪುರುಷ ಕಾಶಿ ವಿಶ್ವನಾಥನ ಅಂಶಸಂಭೂತರೆಂಬ ಪ್ರತೀತಿ ಇದ್ದು, ಲೋಕೋದ್ದಾರಕ್ಕಾಗಿ ಹಂಪಿ ಮಾರ್ಗವಾಗಿ ಕೊಪ್ಪಳಕ್ಕೆ ಬಂದು ಪೂರ್ವ ದಿಕ್ಕಿಗಿರುವ ಗುಡ್ಡದ ಗುಹೆಯಲ್ಲಿ ವಾಸಮಾಡತೊಡಗಿದ ಪೂಜ್ಯ ಶ್ರೀ ಕಾಶಿ ಚರವರ್ಯ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳೇ ಶ್ರೀ ಗವಿಮಠದ ಪವಿತ್ರ ಪರಂಪರೆಯ ಪ್ರಥಮರು. ಇವರ ಕಾಲದಲ್ಲಿ ವ್ಯವಸ್ಥಿತ ಪೂಜಾ ಕೇಂದ್ರವಾಗಿ ಬೆಳೆದ ಗವಿಮಠವು ಭವ್ಯ ಪರಂಪರೆ ಹೊಂದಿ ಜಗದಗಲ ಕೀರ್ತಿ ಪಡೆಯಿತು.. ಮಸ್ಕಿಯ ಶರಣ ಹೂಳಿಯ ಹಂಪಯ್ಯ ಕ್ರಿ.ಶ. ೧೦೮೬ ರಲ್ಲಿ ಶ್ರೀ ಗವಿಮಠದ ಗುಹೆಯ ಮುಂದಿನ ಭಾಗವನ್ನು ಕಟ್ಟಿಸಿದರು. ಭಕ್ತರ ಆರಾಧ್ಯದೈವ ಶ್ರೀ ಗವಿಸಿದ್ಧೇಶ್ವರರು : ನಾಡಿನ ಭಕ್ತಕೋಟಿಯ ಆರಾಧ್ಯದೈವ ಗವಿಮಠ ಪರಂಪರೆಯ ಹನ್ನೊಂದನೆಯ ಪೀಠಾಧಿಪತಿಗಳಾದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಅಪ್ರತಿಮ ತಪೋಬಲದ ಅಗಾಧ ಮಹಿಮಾಶೀಲರು. ಅನಂತಾನಂತ ಲೀಲೆಗಳ ಸಹಜ ಸಂಪನ್ನತೆಯ ಇವರು ಶ್ರೀ ಗವಿಮಠದ ಕೀರ್ತಿಯನ್ನು ಉಂತ್ತುಂಗಗೊಳಿಸಿದ ಉತ್ತಮೊತ್ತಮರು. ಸಮಸ್ತ ಭಕ್ತರ ಚೈತನ್ಯದಾಯಕರು, ಬಡವರ ಸಂಜೀವಿನಿ, ಆಧ್ಯಾತ್ಮದ ಅಕ್ಷಯಗಣಿ, ಆಸ್ತಿಕರ ಅಗರ್ಭ ಆಸ್ತಿ ಮತ್ತು ಸರ್ವಹೃದಯಗಳು ಹುರಿಗೊಳ್ಳುವ ಭಕ್ತಿಯ ಬಳ್ಳಿಯ ಹಂದರವಾಗಿದ್ದರು. ಹತ್ತೊಂತ್ತನೆಯ ಶತಮಾನದಲ್ಲಿ ಕೊಪ್ಪಳದ ಹತ್ತಿರವಿರುವ ಮಂಗಳಾಪೂರದಲ್ಲಿ ಹಿರೇಮಠದ ಮಹಾದೇವಯ್ಯ ಮತ್ತು ಗುರುಲಿಂಗಮ್ಮ ದಂಪತಿಗಳ ಉದರದಲ್ಲಿ ಜನಿಸಿ, ಕೊಪ್ಪಳ ಜಡೇಗೌಡರ ಮನೆಗೆ ಬಂದು ಮಳೆಯ ಮಲ್ಲೇಶನ ಮಡಿಲಲ್ಲಿ ತಪವನಾಚರಿಸಿ ಗುರು ಚನ್ನಸವ ಶಿವಯೋಗಿಗಳ ಅನುಗ್ರಹದಿಂದ ಗವಿಮಠದ ಗವಿಯೊಳಗೆ ನೆಲೆನಿಂತು ಶಿವಯೋಗ ಸಿದ್ದಿಯಯನ್ನು ಸಾಧಿಸಿದ್ದರಿಂದ ಗುಡದಯ್ಯನಿಗೆ ಗುರುಗಳಿಂದಲೇ ಗವಿಸಿದ್ದೇಶ್ವರರೆಂದು ಪುನಃನಾಮಕರಣ ಮಾಡಲಾಯಿತು. ಮಾನವೀಯ ಮೌಲ್ಯಗಳನ್ನು, ಜ್ಯಾತ್ಯಾತೀತ ಮನೋಭಾವನೆಯನ್ನು, ಧರ್ಮದ ಅರ್ಥವನ್ನು ಪ್ರಚಾರ ಮಾಡಿದ ಗವಿಸಿದ್ಧೇಶ್ವರರು ಭವತಿ ಎಂದು ಬಂದ ಭಕ್ತರನ್ನು ಕರುಣಾಪೂರ್ವಕವಾಗಿ ತಾಯಿಯಂತೆ ಎತ್ತಿಕೊಂಡು ಉದ್ದರಿಸಿದ ಘಟನೆಗಳು ನೂರಾರು. ಬರಗಾಲದಿಂದ ತತ್ತರಿಸಿದ ಜನತೆಯ ಅನುಕೂಲಕ್ಕಾಗಿ ಗಂಜಿ ಕೇಂದ್ರಗಳನ್ನು ತೆರೆದು ತಿಮ್ಮಾಪೂರ, ಹಿರೆಸಿಂದೋಗಿ, ಬಿಸರಹಳ್ಳಿ, ಅಳವಂಡಿ ಮೊದಲಾದ ಗ್ರಾಮಗಳ ಜನತೆಯನ್ನು ರಕ್ಷಿಸಿದರು. ಹೈದರಾಬಾದ ನಿಜಾಮನ ಕುಷ್ಟರೋಗ ಕಳೆದುದಕ್ಕಾಗಿ ಶ್ರೀ ಗವಿಮಠಕ್ಕೆ ನವಾಬನು ೧೩೦೦ ಎಕರೆ ಜಮೀನನ್ನು ಉಂಬಳಿಯಾಗಿ ಕೊಟ್ಟ ದತ್ತಿ ಪತ್ರ ಉಲ್ಲೇಖನೀಯವಾಗಿದೆ. (ಪ್ರಸಕ್ತ ಈ ಎಲ್ಲ ಭೂಮಿಗಳು ಈಗ ಊಳುವವನಿಗೆ ಸೇರಿವೆ) ಶಾಲಿವಾಹನಶಕೆ ೧೭೩೫ ಶ್ರೀ ಮುಖ ಸಂವತ್ಸರ ಪುಷ್ಯಬಹುಳ ಬಿದಿಗೆಯಂದು (ಕ್ರಿ.ಶ.೧೮೧೬) ರಲ್ಲಿ ಶ್ರೀ ಗವಿಸಿದ್ಧೇಶ್ವರರು ಪರಮಾತ್ಮನ ಸಾನಿಧ್ಯ ಸೇರಿದರು. ಗುರುಗಳಿಗಾಗಿ ನಿರ್ಮಿಸಿದ ಸಮಾಧಿಯಲ್ಲಿ ತಾವೇ ಪ್ರವೇಶಿಸಿ ನಿರ್ವಿಕಲ್ಪ ಸಮಾಧಿಸ್ಥರಾಗಿ ಗುರುಗಳಿಂದಲೇ ಜಾತ್ರೆ ಮಾಡಿಸಿಕೊಂಡ ಯತಿಪುಂಗವರು. ಶ್ರೀ ಮಠದ ಉಜ್ವಲ ಪರಂಪರೆಗೆ ಕರ್ತತ್ವ ಶಕ್ತಿಯನ್ನು ಕರುಣಿಸಿದ ಕರುಣಾಮೂರ್ತಿಗಳು. ನಾಗೇಶ ಶಾಸ್ತ್ರಿಗಳು ಗವಿಸಿದ್ಧೇಶ್ವರ ಪುರಾಣ ರಚಿಸಿದರು. ನಿಟ್ಟಾಲಿ ಶಿವರುದ್ರಪ್ಪನವರು ಶ್ರೀ ಗವಿಸಿದ್ಧೇಶ್ವರ ಮಹಾತ್ಮೆ ನಾಟಕವನ್ನು ಬರೆಯುವುದರ ಮೂಲಕ ನಾಸ್ತಿಕರನ್ನು ಆಸ್ತಿಕರನ್ನಾಗಿ ಮಾಡಿದರು. ಮಾರುತೇಶ ಮಾಂಡ್ರೆಯವರೂ ಕೂಡ ಶ್ರೀ ಗವಿಸಿದ್ಧೇಶ್ವರ ಮಹಾತ್ಮೆ ನಾಟಕ ಬರೆದರು. ಧರ್ಮಜ್ಞಾನಜ್ಯೋತಿ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳು : ಸಂಸ್ಥಾನ ಶ್ರೀ ಗವಿಮಠದ ಹದಿನಾರನೇ ಪೀಠಾಧಿಪತಿಗಳಾಗಿದ್ದ ಪರಮಪೂಜ್ಯ ಲಿಂ.ಘೇ ಮ.ನಿ.ಪ್ರ.ಜ. ಮರಿಶಾಂತವೀರ ಮಹಾಸ್ವಾಮಿಗಳು ತಪೋನಿಷ್ಠರು, ಆಯುರ್ವೇದ ಅಧ್ವರ್ಯರು, ವಾಕ್ ಸಿದ್ದಿಪುರುಷರು ಆದ ಇವರು ಬರಗಾಲ ಬವಣೆಯ ಈ ನಾಡ ಜನತೆಯ ಉದ್ಧಾರ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದನ್ನು ಮನಗಂಡು ೧೯೫೧ ರಲ್ಲಿ ಶ್ರೀ ಗವಿಸಿದ್ಧೇಶ್ವರ ಶಾಲೆಯನ್ನು ಸ್ಥಾಪಿಸಿ ಅಕ್ಷರಾಮೃತಧಾರೆಯನ್ನು ಭೋರ್ಗರೆಸಿದ ಭಗೀರಥರು. ಆಯುರ್ವೇದ ಸಂಸ್ಕೃ ಹಾಗೂ ಶಾಸ್ತ್ರ ಜ್ಞಾನ ಪ್ರಸಾರಗೊಳಿಸಿ ಹೈದರಾಬಾದ ಕರ್ನಾಟಕ ಪ್ರದೇಶದ ಭಾಗ್ಯದ ಬಾಗಿಲನ್ನೇ ತೆರೆದವರು. ಅಸಂಖ್ಯ ಅವಕಾಶ ವಂಚಿತ ಅಸಹಾಯಕ ಮಕ್ಕಳಿಗೆ ಶಿಕ್ಷಣದ ಅವಕಾಶ ಕಲ್ಪಿಸಿ ಕೊಡುವುದನ್ನು ಶ್ರೀ ಗವಿಸಿದ್ದೇಶ್ವರನ ಆರಾಧನೆಗೆ ಸರಿಸಮಾನವೆಂದೇ ಅವರು ನಂಬಿದ್ದರು. ಸಮಸ್ತ ಜನಕೋಟಿಯನ್ನು ಕತ್ತಲೆಯಿಂದ ಬೆಳಕಿನಡೆಗೆ ಮುನ್ನಡೆಸಿದರು. ವಿದ್ಯಾರ್ಥಿಗಳಲ್ಲಿಯೇ ಗವಿಸಿದ್ಧೇಶನನ್ನು ಕಾಣುತ್ತಿದ್ದ ಪೂಜ್ಯರು ಬಡವಿದ್ಯಾರ್ಥಿಗಳಿಗಾಗಿ ಗವಿಮಠದಲ್ಲಿ ಉಚಿತ ಪ್ರಸಾದ ನಿಲಯ ವ್ಯವಸ್ಥೆಗೊಳಿಸಿದರು. ಸುತ್ತಲಿನ ಹಳ್ಳಿಗಳ ಕಡುಬಡವ ವಿದ್ಯಾರ್ಥಿಗಳನ್ನು ಶ್ರೀ ಗವಿಮಠಕ್ಕೆ ಕರೆತಂದು, ಶಿಕ್ಷಣದ ಎಲ್ಲ ಸೌಲಭ್ಯಗಳನ್ನು ಒದಗಿಸಿ ಅವರ ಶೈಕ್ಷಣಿಕ ಪ್ರಗತಿ ಕಂಡು ಸಾರ್ಥಕ ಭಾವನೆಯಿಂದ ಸಂತೃಪ್ತರಾಗುತ್ತಿದ್ದರು. ಹೀಗೆ ಶ್ರೀ ಮಠದ ಉನ್ನತ ಘನತೆಗೆ ಮೆರಗು ನೀಡಿದ ಮಹಿಮಾಶೀಲರಾದರು. ಇವರು ಈಗಿನ ಗದಗ ಜಿಲ್ಲೆಯ ರೋಣ ಲೂಕಿನ ಸೂಡಿಯವರು. ವೀರಶೈವ ಸಂಪ್ರದಾಯಸ್ಥ ಜುಕ್ತಿ ಹಿರೇಮಠದ ಶ್ರೀ ಬಸವಲಿಂಗಯ್ಯ ಹಾಗೂ ಶ್ರೀ ಮತಿ ಶಾಂತಮ್ಮನವರ ಪುಣ್ಯಗರ್ಭದಲ್ಲಿ ೦೩-೧೨-೧೮೮೮ ರಲ್ಲಿ ಜೇಷ್ಠ ಸುಪುತ್ರರಾಗಿ ಜನಿಸಿದರು. ಇವರಿಗೆ ಮೊದಲು ಗುರುನಂಜಯ್ಯನೆಂದು ನಾಮಕರಣ ಮಾಡಲಾತ್ತು . ಗುರುನಂಜಯ್ಯ ಸೂಡಿಯಲ್ಲಿಯೇ ಪ್ರಾಥಮಿಕ ಅಭ್ಯಾಸದ ಜೊತೆಗೆಗೆ ತಂದೆಯ ಸಹಕಾರದಿಂದ ಸಂಸ್ಕೃತ ಕಾವ್ಯಗಳನ್ನು ಸ್ಪುಟವಾಗಿ ಓದಿ ಅರ್ಥೈಸುವುದರಲ್ಲಿ ನಿಸ್ಸೀಮರಾದರು. ಶ್ರೀ ಕೊಟ್ಟೂರ ಬಸವೇಶ್ವರ ಶಿವಾಚಾರ್ಯರ ಸಾನಿಧ್ಯದಲ್ಲಿ ಸಂಸ್ಕೃತ ಅಭ್ಯಾಸ ನಡೆಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೊಟ್ಟೂರ, ಅಬ್ಬಿಗೇರಿ, ಹುನುಗುಂದದಲ್ಲಿ ಅಧ್ಯಯನ ಮಾಡಿ ಸೊಲ್ಲಾಪುರದ ಶ್ರೀ ವಾರದ ಮಲ್ಲಪ್ಪನವರ ಪಾಠಶಾಲೆ ಸೇರಿದರು. ಅಲ್ಲಿ ಪಂಡಿತ ಮಲ್ಲಿಕಾರ್ಜುನ ಶಾಸ್ತ್ರಿಗಳಲ್ಲಿ ಸಂಸ್ಕೃ, ಸಾಹಿತ್ಯ, ನ್ಯಾಯ, ತರ್ಕ, ವ್ಯಾಕರಣಗಳನ್ನು ಶೃದ್ಧಾಪೂರ್ವಕವಾಗಿ ಐದು ವರ್ಷಗಳ ಕಾಲ ಅಭ್ಯಾಸ ಮಾಡಿದರು. ನಂತರ ಇವರನ್ನು ಹೆಚ್ಚಿನ ಅಭ್ಯಾಸಕ್ಕಾಗಿ ಕಾಶಿಗೆ ಕಳುಹಿಸಲಾಯಿತು. ಕಾಶಿಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಸಂಸ್ಕೃತ, ಸಾಹಿತ್ಯ, ತರ್ಕ, ನ್ಯಾಯ, ವ್ಯಾಕರಣ ಸಾಂಖ್ಯ, ಆಯುರ್ವೇದಗಳನ್ನು ಅಭ್ಯಾಸಮಾಡಿ ಶ್ರೀ ಕಂಠ ಶಿವಾಚಾರ್ಯ ನಾಮಧ್ಯೆಯದೊಂದಿಗೆ ಸೂಡಿಗೆ ದಯಮಾಡಿಸಿದರು. ಶ್ರೀ ಗುರು ನಂಜಯ್ಯನವರು ೧೯೦೯ ರಲ್ಲಿ ಳ್ಳಾರಿಯಲ್ಲಿ ನಡೆದ ವೀರಶೈವ ಮಹಾಸಭೆಗೆ ವಾರದ ಮಲ್ಲಪ್ಪನವರ ಜೊತೆ ಬಂದಿದ್ದರು. ಈ ಸಭೆಗೆ ಗವಿಮಠದ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು ದಯಮಾಡಿಸಿದ್ದರು. ಗುರುನಂಜಯ್ಯನವರ ಸಂಸ್ಕೃ ಭಾಷಾ ಪಾಂಡಿತ್ಯ ಅರಿತು ತಮ್ಮ ಪೀಠಕ್ಕೆ ಪೀಠಾಧಿಪತಿಗಳನ್ನಾಗಿ ನೇಮಿಸಲು ನಿಶ್ಚಯಿಸಿದರು (ಹಾಗೆಂದು ಮೃತ್ಯಪತ್ರದಲ್ಲಿ ಬರೆದಿದ್ದರಂತೆ) ಕೊಪ್ಪಳದ ದೈವದವರು ಸೂಡಿಗೆ ಹೋಗಿ ಶ್ರೀ ಜುಕ್ತಿಹಿರೇಮಠದ ಬಸಲಿಂಗಯ್ಯನವರನ್ನು ಕಂಡು ವಿಷಯ ತಿಳಿಸಿ ಒಪ್ಪಿಗೆ ಪಡೆದುಕೊಂಡರು. ಮಾತೋಶ್ರೀ ಶಾಂತಮ್ಮನವರು ಒಲ್ಲದ ಮನಸ್ಸಿನಿಂದ ಮಗನನ್ನು ಬಿಟ್ಟುಕೊಟ್ಟರು. ಶ್ರೀ ಕಂಠಶಿವಾಚಾರ್ಯರು ೧೯೨೨ ರಲ್ಲಿ ಕೊಪ್ಪಳ ಗವಿಮಠದ ಹದಿನಾರನೇ ಶ್ರೀ ಗಳಾಗಿ ಮರಿಶಾಂತವೀರ ಮಹಾಸ್ವಾಮಿಗಳು ಎಂ ಬ ನಾಮಕರಣದೊಂದಿಗೆ ಪೀಠಾಧಿಪತಿಗಳಾದರು. ಸರಳ ಹಾಗೂ ಶಿಕ್ಷಣಪ್ರೇಮಿಗಳಾಗಿದ್ದ ಇವರು ವೈದ್ಯರ ತಂಡವನ್ನೇ ನಿರ್ಮಿಸಿದರು. ಮೌನ ತಪಸ್ವಿ ಚಿಕೇನಕೊಪ್ಪದ ಶ್ರೀ ಚನ್ನವೀರ ಮಹಾಶರಣರಿಗೆ ಅನುಗ್ರಹ ಕರುಣಿಸಿದರು.ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಸಂಸ್ಥೆ ಸ್ಥಾಪಿಸಿ ಶ್ರೀ ಮಠದ ಭೂ ಆಸ್ತಿಯನ್ನೆಲ್ಲ ಸಂಸ್ಥೆಗೆ ದಾನ ನೀಡಿ ಶಿಕ್ಷಣ ದಾಸೋಹ ನಿತ್ಯ ನಿರಂತರಗೊಳ್ಳಲು ಅವಕಾಶ ಕಲ್ಪಿಸಿಕೊಟ್ಟ ಪರಮಪೂಜ್ಯರು ನಿಜಕ್ಕೂ ಪ್ರಾತಃ ಸ್ಮರಣೀಯರು. ಅನ್ನ ಬರ ಹಾಗೂ ಅಕ್ಷರ ಬರ ಪೀಡಿತ ಈ ಭಾಗದಲ್ಲಿ ಪೂಜ್ಯರ ಅನ್ನದಾಸೋಹ, ಜ್ಞಾನದಾಸೋಹ, ಭಕ್ತಿದಾಸೋಹ ಅಕ್ಷರಶಃ ಕ್ರಾಂತಿಯನ್ನೇ ಮಾಡಿತು. ಶ್ರೀ ಮಠದ ಪ್ರಸಾದ ಹಾಗೂ ಶಿಕ್ಷಣ, ಆಧ್ಯ್ಕಾ ಸಂಸ್ಕಾರದ ಪ್ರಯೋಜನ ಪಡೆದ ವಿದ್ಯಾರ್ಥಿಗಳು ಇಂದು ನಾಡಿನಾದ್ಯಂತ, ವಿದೇಶಾದ್ಯಂತ ಶಿಕ್ಷಣ, ವೈದ್ಯಕೀಯ, ಆಡಳಿತ ಹಾಗೂ ರಾಜಕೀಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಹೆಮ್ಮೆಯ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಸಾಧನೆಗಳಿಗಾಗಿ ಶ್ರೀ ಮಠದ ಋಣವನ್ನು ಮನಸಾರೆ ಸ್ಮರಿಸುತ್ತಿದ್ದಾರೆ. ಪೂಜ್ಯ ಮರಿಶಾಂತವೀರ ಮಹಾಸ್ವಾಮಿಗಳವರು ಪ್ರಕಾಂಡ ಪಂಡಿತರಾಗಿದ್ದರಲ್ಲದೇ ೧೯೨೪-೨೫ ರ ಬನವಾಸಿ ಮಧುಕೇಶ್ವರ ದೇವಸ್ಥಾನದ ಪ್ರಕರಣದಲ್ಲಿ ಶಾಸ್ತ್ರಗಳ, ವೇದಾಗಮಗಳ ಅಪಾರ ವಿದ್ವತ್ ನ ನಿಧಿಯೇ ಆಗಿದ್ದ ಪೂಜ್ಯರ ಪಾತ್ರ ಹಿರಿದಾಗಿತ್ತು. ಆಗ ಕೇವಲ ೩೬ ವಯಸ್ಸಿನ ಪೂಜ್ಯರ ಅಗಾಧ ಜ್ಞಾನ ಹಾಗೂ ಅನನ್ಯ ತರ್ಕ ಸಾಮರ್ಥ್ಯ ಅಪಾರವಿತ್ತು . ಪರಳಿ ವೈಜನಾಥ ದೇವಸ್ಥಾನದ ವಿಷಯದಲ್ಲೂ ಪೂಜ್ಯರ ಪಾತ್ರ ಮಹತ್ವದ್ದಾಗಿದೆ. ಗವಿಮಠಕ್ಕೆ ಮುಂದಿನ ಉತ್ತರಾಧಿಕಾರಿಯನ್ನು ನೇಮಕ ಮಾಡುವ ಅಧಿಕಾರವನ್ನು ಭಕ್ತರು ಜಗದ್ಗುರು ಮರಿಶಾಂತವೀರ ಮಹಾಸ್ವಾಮಿಗಳಿಗೆ ಬಿಟ್ಟುಕೊಟ್ಟರು. ಉಮಾಪತಿಯವರ ಹೆಸರನ್ನು ಸೂಚಿಸಿದಾಗ ಎಲ್ಲರೂ ಒಪ್ಪಿದರು. ಸಾತ್ವಿಕರು, ಶಾಂತರು, ಲಿಂಗಾಪೂಜ ನಿಷ್ಠರು ಮಠಕ್ಕೆ ಯೋಗ್ಯವೆಂದು ತೀರ್ಮಾನಿಸಲಾಯಿತು. ಜಗದ್ಗುರು ಮರಿಶಾಂವೀರ ಮಹಾಸ್ವಾಮಿಗಳು ದಿನಾಂಕ ೨೭-೪-೧೯೬೬ ರಂದು ಶ್ರೀ ಉಮಾಪತಿಯವರನ್ನು ಜಗದ್ಗುರು ಶಿವಶಾಂತವೀರ ಮಹಾಸ್ವಾಮಿಗಳೆಂದು ಹೆಸರಿಸಿ ನೂತನ ಪೀಠಾಧಿಪತಿಗಳನ್ನಾಗಿಸಿದರು. ೦೧-೦೭-೧೯೬೭ ರಂದು ಮರಿಶಾಂತವೀರ ಮಹಾಸ್ವಾಮಿಗಳು ಲಿಂಗೈಕ್ಯರಾದರು. ಸರ್ವಾಂಗಲಿಂಗಿ ಜಗದ್ಗುರು ಶ್ರೀ ಶಿವಶಾಂವೀರ ಶಿವಯೋಗಿಗಳು : ಪರಮಪೂಜ್ಯ ಲಿಂ. ಜಗದ್ಗುರು ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು ಶ್ರೀ ಮಠದ ಹದಿನೇಳನೇ ಪೀಠಾಧಿಪತಿಗಳು. ಶ್ರೀ ಮಠದ ಭವ್ಯ ಪರಂಪರೆಯ ಕಳಸಪ್ರಾಯರು. ತಮ್ಮ ಗುರುಗಳ ಹಾಗೂ ಶ್ರೀ ಮಠದ ಪವಿತ್ರ ಪರಂಪರೆಯ ಸರ್ವ ಶ್ರೇಷ್ಠತೆಯನ್ನು ಸಾಕಾರಗೊಳಿಸಲು ಅವಿರತ ಶ್ರಮಿಸಿ ಶ್ರೀ ಗಂಧದಂತೆ ತಮ್ಮನ್ನು ತೆಯ್ದುಕೊಂಡು ಭಕ್ತರ ಹೃನ್ಮಂದಿರದಲ್ಲಿ ಚಿರಸ್ಥಾಯಿಗೊಂಡವರು. ಅನುಷ್ಠಾನ ಶ್ರೇಷ್ಠತ್ವ, ತಪೋಬಲ, ಶಿಕ್ಷಣ ಪ್ರೇಮ ಅತಿಸಾಮಾನ್ಯರನ್ನು ಅತ್ಯಂತ ಮಮತೆಯಿಂದ ಮಾತನಾಡಿಸುವ ಅಚಲ ಬದ್ದತೆಗಳಿಂದಾಗಿ ನಡೆದಾಡುವ ದೇವರೆಂದೇ ನಾಡಿನಾದ್ಯಂತ ಪೂಜೆಗೊಂಡವರು. ಶ್ರೀ ಮಠದ ಸರ್ವಾಂಗೀಣ ಶ್ರೇಯೋಭಿವೃದ್ಧಿ ಸಾಧಿಸಿದ ಅದಮ್ಯ ಕ್ರಿಯಾಶೀಲರು, ಆಯುರ್ವೇದ ಪರಂಪರೆಗೆ ಕಿರೀಟಪ್ರಾಯವಾಗಲ್ಲ ಜಗದ್ಗುರು ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯಕ್ಕೆ ತಮ್ಮ ನಿಸ್ಸೀಮ ಸಂಕಲ್ಪ ಶಕ್ತಿಯನ್ನು ಧಾರೆಯೆರೆದು ಸಕಾರ ಗೊಳಿಸಿದರು. ಜಗದ್ಗುರು ಶಿವಶಾಂತವೀರ ಮಹಾಸ್ವಾಮಿಗಳವರು ತಮ್ಮ ಹೆಸರಿಗೆ ತಕ್ಕಂತೆ ಶಾಂತಸ್ವರೂಪಿಗಳು, ಶಿವಸ್ವರೂಪಿಗಳಾಗಿದ್ದರು. ವೈರಾಗ್ಯದಲ್ಲಿ ವೀರತ್ವನ್ನು ಮೈಗೂಡಿಸಿಕೊಂಡು ಶಿವಶಾಂತವೀರರಾದರು. ಭಕ್ತರು ತಮ್ಮ ದಿನನಿತ್ಯದ ಸಂಸಾರದ ಜಂಜಾಟದಲ್ಲಿ ನೊಂದು, ಬೆಂದು ತಮ್ಮ ಕಷ್ಟ ಸುಖಗಳನ್ನು ಮಹಾಪಾದದಲ್ಲಿ ನಿವೇದಿಸಿಕೊಳ್ಳುತ್ತಿದ್ದರು. ತಮ್ಮ ಅನಾರೋಗ್ಯ, ವ್ಯಾಪಾರೋದ್ಯಮದಲ್ಲಿಯ ಲಾಭ - ಹಾನಿ, ಒಕ್ಕಲುತನದಲ್ಲಿಯ ಕಡಿಮೆ ಇಳುವರಿ, ಹೊಲಕ್ಕೆ ನೀರಾವರಿ ಬೋರು (ಕೊಳವೆ ಬಾವಿ) ಹಾಕಿಸುವವರು, ತಮ್ಮ ಮನೆತನ ಏರಿಕೆ ಇಲ್ಲದಿರುವವರು, ಮನಸ್ಸಿಗೆ ನೆಮ್ಮದಿ, ಶಾಂತಿ ಇಲ್ಲದಿರುವವರು, ಮನೆಯೊಳಗಣ ಕಿರಿಕಿರಿ, ದಾಯಾದಿಗಳ ಜಗಳ, ಮನೆತಗಳ ಜಗಳ, ಕಷ್ಟ ನಷ್ಟಗಳು, ಸಂತಾನ ವಿಲ್ಲದಿರುವವರು, ಮಕ್ಕಳಿಗೆ ಬಾಲಾರಿಷ್ಠಗಳು, ಕೈಕಾಲು ಊನವಾಗಿರುವರು, ಮೂಕರಾಗಿರುವವರು, ನಾಲಿಗೆ ಅಂಟಾಗಿರುವವರು, ಇರುಳುಗಣ್ಣು , ತೊನ್ನು, ಕುಷ್ಟರೋಗಗಳಿಂದ ಬಳಲುತ್ತಿರುವವರು, ಕ್ಯಾನ್ಸರ್ ನಿಂದ ಬಳಲುತ್ತಿದ್ದವರು, ಬಂಜೆತನ ಅನುಭವಿಸುತ್ತಿರುವವರು, ರೋಗಗಳಿಂದ ಯಮಯಾತನೆ ಪಡುತ್ತಲಿರುವ ಸ್ತ್ರೀಯರು, ನೌಕರಿಗಾಗಿ ಅಲೆದಾಡುತ್ತಿರುವವರು, ಪರೀಕ್ಷೆ ಪಾಸಾಗಬಯಸುವ ಮಂದಮತಿಗಳು, ಅಂಗವಿಕಲರು, ಮತಿವಿಕಲರು ಹೀಗೆ ಒಬ್ಬರೇ ಇಬ್ಬರೇ ನೂರಾರು ಸಹಸ್ರಾರು ಭಕ್ತರು ತಮ್ಮ ಸಮಸ್ಯೆಗಳನ್ನು ಶ್ರೀ ಗಳ ಮುಂದೆ ತೋಡಿಕೊಳ್ಳುತ್ತಿದ್ದರು. ಬಂದ ಭಕ್ತರ ಕಷ್ಟಗಳಿಗೆ ಶ್ರೀ ಗಳು ಸ್ಪಂದಿಸಿ ಸಾಂತ್ವಾನ ಹೇಳುತ್ತಿದ್ದರು, ಬದುಕಿನಲ್ಲಿ ಭರವಸೆ ಮೂಡಿಸುತ್ತಿದ್ದರು. ಶಿಕ್ಷಣ ಪ್ರೇಮ, ವಿದ್ಯಾರ್ಥಿಗಳ ಬಗ್ಗೆ ಅಂತಃಕರಣ, ಸಂಸ್ಕೃತ ವಿದ್ವತ್ತು, ಆಯುರ್ವೇದ ಪ್ರತಿಭೆ, ಪರಿಶ್ರಮ ಹಾಗೂ ಪರಿಣಿತಿ, ತಪೋನಿಷ್ಠೆ, ವಿನಯದ ಉತ್ತುಂಗ, ಜ್ಞಾನದ ಹಸಿವು, ಜ್ಞಾನದ ಹಂಬಲ ಹೊಂದಿದ್ದ ಶಿವಶಾಂತವೀರ ಮಹಾಶಿವಯೋಗಿಗಳವರ ಬಹುಮುಖ ಸಾಧನೆಗಳು ಅವರ ಅದಮ್ಯ ಕ್ರಿಯಾಶಕ್ತಿಯ ಸಾಕ್ಷಿಗಳಾಗಿವೆ. ಅವಿರತ ಶ್ರಮದ ಆಧ್ಯಾತ್ಮ ಸಿರಿನಿಧಿ ಪೂಜ್ಯ ಶ್ರೀ ಗಳವರು ಸಂಸ್ಥಾನ ಶ್ರೀ ಗವಿಮಠದ ಭೌತಿಕ ಸ್ವರೂಪ, ಆಧ್ಯಾತ್ಮಿಕ ಹಾಗೂ ಪರಂಪರಾಗತ ಧ್ಯೆಯ, ಆದರ್ಶ ಹಾಗೂ ಮೌಲ್ಯಗಳ ಸಂವರ್ಧನೆಯಲ್ಲಿ ಸಾರ್ಥಕ ಬದಲಾವಣೆಗಳ ಶ್ರೇಯಸ್ಸನ್ನು ಸೂರೆಗೊಳಿಸಿದ್ದಾರೆ. ಅನುಷ್ಠಾನ ಶ್ರೇಷ್ಠರಾದ ಪೂಜ್ಯ ಶಿವಶಾಂತವೀರ ಮಹಾಸ್ವಾಮಿಗಳು ವಿದ್ವಾಂಸರು, ಪರಿಣೀತ ಆಯುರ್ವೇದ ವೈದ್ಯರಾಗಿದ್ದರು. ಪೂಜ್ಯರು ರಚಿಸಿದ ಶ್ರೀ ಗವಿಸಿದ್ಧೇಶ್ವರ ಸುಪ್ರಭಾತ ಅವರ ಉತ್ತಮ ಕೃತಿ. ಆಧ್ಯಾತ್ಮ ಗೀತೆಗಳನ್ನು ರಚಿಸಿದ್ದಾರೆ. ಪೂಜ್ಯರು ಬರೆದ ಮಂಗಳಾರತಿಗಳು ಅನುಭವದ ಅಮೃತಬಿಂದುಗಳು. ಏಳು ಪದ್ಯಗಳು, ಒಂಬತ್ತು ಮಂಗಲಗಳು ಹಾಗೂ ಶ್ರೀ ಗವಿಮಠಾಧೀಶ್ವರ ಸಪ್ತಕಗಳು ಪೂಜ್ಯರಿಂದ ರಚಿಸಲ್ಪಟ್ಟಿವೆ. ಪೂಜ್ಯ ಶ್ರೀ ಗಳವರು ತಮ್ಮ ಗುರುವರ್ಯ ಲಿಂ. ಜಗದ್ಗುರು ಮರಿಶಾಂತವೀರ ಮಹಾಸ್ವಾಮಿಗಳನ್ನು ಕುರಿತು ಗವಿದೀಪ್ತಿ ಎಂಬ ಬೃಹತ್ ಗ್ರಂಥ ಹೊರತಂದರು. ಗವಿಸಿದ್ಧೇಶ್ವರ ಸುಪ್ರಭಾತ ಹಾಗೂ ಗವಿಸಿದ್ಧೇಶ್ವರ ಪುರಾಣದಂಥ ಕೃತಿಗಳನ್ನು ಪ್ರಕಟಿಸಿದರು. ಲಿಂ. ಜಗದ್ಗುರು ಶಿವಶಾಂತವೀರ ಮಹಾಸ್ವಾಮಿಗಳವರ ಷಷ್ಠಬಿ- ಪೂರ್ತಿ ಸಮಾರಂಭ ೧೯೯೩ ರಲ್ಲಿ ನೆರವೇರಿಸಿ ಶಾಂತಪ್ರಭೆ ಅಭಿನಂದನಾ ಗ್ರಂಥ ಅರ್ಪಿಸಲಾಯಿತು.. ಶಿವಶಾಂತವೀರ ಮಹಾಸ್ವಾಮಿಗಳು ಈ ಮಠದ ಸರ್ವತೋಮುಖ ಅಭಿವೃದ್ದಿಗಾಗಿ ಕಾಯಾ ವಾಚಾ ಮನಸಾಪೂರ್ವಕವಾಗಿ ಸೇವೆ ಸಲ್ಲಿಸಿದರು. ಇವರು ೩೭ ವರ್ಷಗಳ ಕಾಲ ಶ್ರೀ ಗವಿಮಠದ ಸಾರ್ಥಕ ಸೇವೆಯನ್ನು ಸಲ್ಲಿಸಿದರು.ತಮ್ಮ ಅನಾರೋಗ್ಯದ ನಿಮಿತ್ಯ ಪೂಜ್ಯ ಶ್ರೀ ಪರ್ವತದೇವರು ಅವರಿಗೆ ಆಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಎಂಬ ಹೆಸರಿನಿಂದ ಕರೆದು ೨೦೦೨ ಸೆಪ್ಟಂಬರ್ ೧೩ ರಂದು ಅಧಿಕಾರ ವಹಿಸಿಕೊಟ್ಟರು. ೨೦೦೩ ರ ಮಾರ್ಚ ೨೬ ರಂದು ಶಿವಶಾಂತವೀರ ಮಹಾಸ್ವಾಮಿಗಳು ಶಿವನ ಪಾದ ಸೇರಿದರು. ರಾಜ್ಯೊತ್ಸವ ಪ್ರಶಸ್ತಿ ಪುರಸ್ಕೃತ ಕವಿ ಗವಿಸಿದ್ಧ ಎನ್. ಬಳ್ಳಾರಿಯವರು ಈ ಲಿಂಗೈಕ್ಯ ಶ್ರೀ ಗಳವರನ್ನು ಕುರಿತು ಹೀಗೆ ಕವನ ಬರೆದಿದ್ದಾರೆ. ಹೆಚ್ಚು ಮಾತನ್ನಾಡುವುದಿಲ್ಲ ಪ್ರೀತಿ ಬಿಡುವುದಿಲ್ಲ ಕೋಟೆಯೊಳಗೆ ಭಕ್ತ ಕೋಟೆಯ ಬಂಧಿಯಾಗಿರುವ ಬುದ್ದಿ ಹೆಸರು ಶಿವಶಾಂತ ಉಸಿರು ಮರಿಶಾಂತ ಒಳಗೊಳಗೆ ಅಂತರಂಗದ ಸಿದ್ಧಿ-ಶುದ್ಧಿ ಆಗಿರಲು ನಿತ್ಯ ಶುದ್ದಿ. |
|
ಕೊಪ್ಪಳ ಗವಿಮಠ |