Text Box:

CONTACT dUS:      kannadanet.com Karishma Digital studio jawahar road, Koppal-583 231

ಕರಿಷ್ಮಾ ಡಿಜಿಟಲ್ಸ್, ಜವಾಹರ ರಸ್ತೆ, ದುರ್ಗಮ್ಮ ಕಟ್ಟೆ ಹತ್ತಿರ ,ಕೊಪ್ಪಳ Phone: 9880257488 E-mail:   kannadanet@gmail.com,sirajbisaralli@in.com

ಮುಖಪುಟ    ಸಾಹಿತಿಗಳು   ಪ್ರತಿಸ್ಪಂದನೆ       ನಮ್ಮನ್ನು ಸಂಪರ್ಕಿಸಿ

Kannadanet.com KOPPAL DIST COMPLETE INFORMATION AND NEWS

ಕನ್ನಡನೆಟ್.ಕಾಂ

Text Box: ಉತ್ತರ ಕರ್ನಾಟಕ ಮತ್ತು ಕೊಪ್ಪಳ ಜಿಲ್ಲೆಯ ಪ್ರಪ್ರಥಮ ಕನ್ನಡ  ಇ-ಪತ್ರಿಕೆ
Text Box: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದ ಉದಯ ಇಟಗಿ ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದಿದ್ದರಿಂದ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. 

ಬಿಸಿಲ ಹನಿ

ಉದಯ ಇಟಗಿ

ದಲ್ಲಾಳಿ

ನಾನೊಬ್ಬ ಪ್ರಸಿದ್ಧ ದಲ್ಲಾಳಿ- ದನದ ವ್ಯಾಪಾರದಲ್ಲಿ. ದಲ್ಲಾಳಿ ಅಂದಮೇಲೆ ಸುಳ್ಳು ಹೇಳದೆ ಇರೋಕಾಗುತ್ತಾ? ಹಿಗಾಗಿ ತಲೆಯಲ್ಲಿ ಸದಾ ಸುಳ್ಳುಗಳನ್ನೇ ತುಂಬಿಕೊಂಡು, ಬಾಯಿತುಂಬಾ ಸಿಹಿಯಾದ ಮಾತುಗಳನ್ನಾಡುತ್ತಾ ದನದ ವ್ಯಾಪಾರಿಗಳಿಗೆ ಅವರ ವ್ಯಾಪಾರದಲ್ಲಿ ನೆರವಾಗುವದೇ ನನ್ನ ಕೆಲಸ. ಆದ ಕಾರಣಕ್ಕೆ ಈ ಭಾಗದಲ್ಲಿ ಜನ ನನ್ನನ್ನು ಗೌರವದಿಂದ ಕಾಣುತ್ತಾರೆ. ನನ್ನ ಕಂಡೊಡನೆ ಅವರು ನನ್ನನ್ನು ಚಹಾದ ಅಂಗಡಿಗೆ ಕರೆದುಕೊಂಡು ಹೋಗಿ “ದಭೆವಾಲಾ, ಎರಡು ಚಾ ತಯಾರಿಸು” ಎಂದು ಪ್ರೀತಿಯಿಂದ ಹೇಳುತ್ತಾರೆ. ನನ್ನನ್ನು ನೋಡಿದ ಮೇಲೆ ಆ ಚಹಾದ ಅಂಗಡಿ ಮಾಲಿಕ “ಓಹೋ, ತನ್ಸುಖ್! ಹೆಂಗಿದ್ದಿಯಪಾ? ಎಲ್ಲಾ ಅರಾಮಾನಾ? ಈ ನಡುವೆ ವ್ಯಾಪಾರ ಹೆಂಗೆ ನಡಿತಾ ಇದೆ?” ಎಂದು ಅತ್ಯುತ್ಸಾಹದಿಂದ ಎದ್ದುನಿಂತು ನಾನವನಿಗೆ ಚನ್ನಾಗಿ ಗೊತ್ತಿರುವೆನೆಂದು ತೋರಿಸಲು ಕೇಳುತ್ತಾನೆ. ಆದರೆ ಒಂದೊಂದು ಸಾರಿ ಹೀಗೆ ಕೇಳುತ್ತಿರುವರು ಯಾರೆಂದು ನನಗೆ ತಿಳಿಯದೇ ಕಕ್ಕಾಬಿಕ್ಕಿಯಾಗುತ್ತೇನೆ, ಅದು ಬೇರೆ ವಿಷ್ಯ.

ನಾನು ದಿನಾ ಬೆಳಗಾದರೆ ಒಂದು ದನದ ಜಾತ್ರೆಯಿಂದ ಇನ್ನೊಂದು ದನದ ಜಾತ್ರೆಗೆ ಹೋಗುವವ. ಒಬ್ಬ ದನದ ದಲ್ಲಾಳಿ ಇನ್ನೇನು ತಾನೆ ಮಾಡಲು ಸಾಧ್ಯ? ದನದ ಜಾತ್ರೆಗಳು ವರ್ಷದುದ್ದಕ್ಕೂ ಇಲ್ಲಲ್ಲಾಂದ್ರೆ ಇನ್ನೆಲ್ಲೋ ಒಂದು ಕಡೆ ನಡೆದೇ ಇರುತ್ತವೆ. ನಾನು ಅವಕೆಲ್ಲಾ ಹೋಗಲೇಬೇಕು. ಏಕೆಂದರೆ ಅವೇ ನನ್ನ ಆದಾಯದ ಮೂಲಗಳು. ನಾನೀಗಾಗಲೆ ನಿಮಗೆಲ್ಲರಿಗೂ ಹೇಳಿದ್ದೇನೆ; ನಾನು ತುಂಬಾ ಸುಳ್ಳು ಹೇಳುತ್ತೇನೆಂದು. ಅದು ನನ್ನ ಬಾಯಿಗೆ ಒಗ್ಗಿಹೋಗಿದೆ. ನಾನು, ಎಳ್ಳಷ್ಟೂ ಕೆಲಸಕ್ಕೆ ಬಾರದ ದನಗಳನ್ನು ಭರ್ಜರಿ ಬೆಲೆಗೂ ಹಾಗೂ ಎಲ್ಲ ರೀತಿಯಿಂದಲೂ ಚನ್ನಾಗಿರುವ ದನಗಳನ್ನು ಭಾರಿ ಕಡಿಮೆ ಬೆಲೆಗೂ ಹಾಡಹಗಲೇ ಮಾರಾಟ ಮಾಡಿಸಬಲ್ಲೆ. ಹರಳನ್ನೊಯ್ದು ಮುತ್ತನ್ನು, ಮುತ್ತನ್ನೊಯ್ದು ಹರಳನ್ನಾಗಿಯೂ ಪರಿವರ್ತಿಸಲು ನನಗೆ ಬಹಳ ಸಮಯ ಬೇಕಾಗಿಲ್ಲ. ಕೊಂಡುಕೊಳ್ಳುವವರಿಗೆ ತನ್ನ ಮುಂದೆ ಬಿದ್ದಿರುವ ಕಬ್ಬಿಣವನ್ನು ಚಿನ್ನವೆಂದು ನಂಬಿಸಿ ಮೋಸ ಮಾಡುವ ನನಗೆ ಇಂತಹ ಕುತಂತ್ರಗಳೇನೂ ಹೊಸದಲ್ಲ. ಆ ಮೂಲಕ ನಾನು ಬರೀ ಕೊಳ್ಳುವನನ್ನು ಮಾತ್ರ ಮೋಸ ಮಾಡುವದಿಲ್ಲ, ಮಾರಾಟಗಾರನನ್ನು ಸಹ ವಂಚಿಸುತ್ತೇನೆ. ಕೆಲವು ದನದ ಮಾಲೀಕರು ಜಾತ್ರೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ತಮ್ಮ ಕಣ್ಣುಗಳನ್ನು ಉಜ್ಜುತ್ತಾ, ಆಕಳಿಸುತ್ತಾ ಕುಳಿತುಕೊಳ್ಳುತ್ತಾರೆ. ಅಂಥವರ ಹತ್ತಿರ ವ್ಯಾಪಾರ ಬೇಗ ಕುದರದಿರಲೆಂದು ಅಗಲೋ ಈಗಲೋ ಎಂಬಂತೆ ಒಂದೊಂದೇ ಗಿರಾಕಿಗಳನ್ನು ಕಳಿಸಿ ಕೊಡುತ್ತೇನೆ. ನಾನು ಹಸುಗಳ ಕೆಚ್ಚಲನ್ನು ಕೈಯಿಂದ ಸವರಿಯೇ ಅದು ಗೊಡ್ಡು ಹೌದೋ ಅಲ್ಲವೋ ಎಂಬುದನ್ನು ಹೇಳುತ್ತೇನೆ. ಒಂದೊಂದು ಸಾರಿ ನಾನು ನೋಡುವ ನೋಟಕ್ಕೆನೇ ಅದರ ಮಾಲಿಕನಿಗೆ ತಾನು ತನ್ನ ಹಸುವಿನಲ್ಲಿ ಮುಚ್ಚಿಟ್ಟ ಕೊರತೆಗಳು ನನಗೆ ಗೊತ್ತಾಗಿಬಿಟ್ಟಿವೆಯೆಂದು ಆತನಿಗೆ ಗೊತ್ತಾಗಿ “ಇದೆಲ್ಲಾ ನಿಂಗೆ ಹೇಗೆ ಗೊತ್ತಾಗುತ್ತೆ, ತನ್ಸುಖ್? ಹಾಗಾದ್ರೆ ಇದು ಬಾಳ ಬೆಲೆ ಬಾಳೋದಿಲ್ಲಾ ಅಂತಿಯಾ? ನೋಡು ಹಾಗಿದ್ರೆ, ನೀನು ಕಮ್ಮಿ ಬೆಲೆಗೆ ಕೊಡು ಅಂದ್ರೆ ಕೊಟ್ಟುಬಿಡ್ತೀನಿ....... ” ಎಂದು ತಾವೇ ಹೇಳುತ್ತಾ ಮುಂದೆ ಬರುತ್ತಾರೆ. ಇದರರ್ಥ ಇಷ್ಟೇ.... ನನಗೆ ಜನರನ್ನು ಹೇಗೆ ಮರುಳು ಮಾಡಬೇಕೆಂಬುದು ಚನ್ನಾಗಿ ಗೊತ್ತಿದೆ. ಅಷ್ಟಕ್ಕೂ ನಾನ್ಯಾರು? ತನ್ಸುಖ್, ಒಬ್ಬ ದಲ್ಲಾಳಿ! 

ನಂದು ತಕ್ಕ ಕೆಲಸವಲ್ಲ ಅಂತಾ ನಂಗೆ ಚನ್ನಾಗಿ ಗೊತ್ತಿದೆ. ದಿನಾಲೂ ಒಬ್ಬ ಮುಗ್ಧನನ್ನು ಮೋಸಗೊಳಿಸುವದಷ್ಟೇ ನನ್ನ ಕಾಯಕ. ಸುಳ್ಳು ಹೇಳುವದು ಕಡು ಪಾಪದ ಕೆಲಸವೆಂದು ನಂಗೆ ಚನ್ನಾಗಿ ಗೊತ್ತು. ಆದರೇನು ನನ್ನ ಹೊಟ್ಟೆಪಾಡಿಗಾಗಿ ಅದನ್ನು ಆವಲಂಬಿಸಲೇಬೇಕಾಗಿದೆ. ಇದನ್ನು ಬಿಟ್ಟರೆ ನನ್ನ ಜೀವನೋಪಾಯಕ್ಕೆ ಬೇರೆ ದಾರಿಯೇ ಇಲ್ಲ. ಮೇಲಾಗಿ ನನಗೆ ಹೊಲವಾಗಲಿ ಇತರೆ ಆಸ್ತಿಯಾಗಲಿ ಯಾವುದೂ ಇಲ್ಲ. ಹಾಗಾಗಿ, ನಾನು ತಾನೆ ಏನು ಮಾಡಲು ಸಾಧ್ಯ? ನನಗೆ ಬೇಕಾಗಿರೋದು ಕಮೀಷನ್ ಒಂದೇ! ನನಗೆ ಗೊತ್ತು ದಲ್ಲಾಳಿ ಕೆಲಸ ಈ ಸಮಾಜದಲ್ಲಿ ಅಂಥಾ ಗೌರವ ತರುವಂಥದ್ದಲ್ಲವೆಂದು. ದಲ್ಲಾಳಿ ಎನ್ನುವ ಪದವೇ ಮನದಲ್ಲಿ ಹೇಸಿಗೆ ಭಾವನೆಯನ್ನು ಮೂಡಿಸುತ್ತದೆ. ಆದರೇನು ಮಾಡ್ಲಿ? ನಾನೊಬ್ಬ ಅಸಹಾಯಕ. ಬೇರೆ ದಾರಿಯೇ ಇಲ್ಲ. ಇಷ್ಟೊತ್ತು ನಾನು ನನ್ನ ಬಗ್ಗೆ ಹೇಳಿಕೊಂಡಿದ್ದು ನನ್ನ ಬುದ್ಧಿವಂತಿಕೆಯನ್ನು ಪ್ರದರ್ಶಿಸುವದಕ್ಕಲ್ಲ. ಆದರೆ ನಾನು ಇಂಥ ಹೀನ ಕೃತ್ಯಗಳನ್ನು ಎಸಗುವದರಲ್ಲಿ ಹೇಗೆ ಪಳಗಿ ಹೋಗಿದ್ದೇನೆಂದು ಹೇಳಿದನಷ್ಟೆ.

ಈ ಘಟನೆ ನಡೆದಿದ್ದು ಒಂದು ಬೇಸಿಗೆಯ ಸಂಜೆ. ನಾನು ಆಗಷ್ಟೆ ಮನೆಗೆ ಮರಳಿ ನನ್ನ ಮನೆಯ ಪ್ರವೇಶದ್ವಾರಕ್ಕೆ ಹೊಂದಿಕೊಂಡಂತೆ ಅದರ ಪಕ್ಕದಲ್ಲಿಟ್ಟಿದ್ದ ಹೊರಸಿನ ಮೇಲೆ ಮಲಗಿದ್ದೆ. ಮೇಲೆ ಗುಬ್ಬಿಗಳು ಒಂದೇ ಸಮನೆ ಕಿಚಪಿಚ ಹಚ್ಚಿದ್ದರಿಂದ ನನಗೆ ನಿದ್ರೆ ಕಿಂಚಿತ್ತೂ ಹತ್ತಿರ ಸುಳಿಯಲಿಲ್ಲ. ಆಗಲೇ ನನ್ನ ಮನೆಯ ಮೇಲ್ಚಾವಣಿಯನ್ನು ನೋಡತೊಡಗಿದೆ. ಅದರ ಗಿಲಾವು ಕಿತ್ತುಹೋಗಿ ಜಂತಿಗಳು ಬಿಡಿಬಿಡಿಯಾಗಿ ಬಿಟ್ಟುಕೊಂಡು ಜೋತುಬಿದ್ದಿದ್ದವು. ಆ ಜಂತಿಗಳು ಒಂದಕ್ಕೊಂದು ಪೈಪೋಟಿ ನಡೆಸಿದವರ ತರ ಈಗಲೋ ಆಗಲೋ ನನ್ನ ಮೇಲೆ ಬೀಳುತ್ತಿವಿಯೇನೋ ಎಂಬಂತೆ ಭಾಸವಾದವು.
ಕಿತ್ತುಹೋದ ಮೇಲ್ಚಾವಣಿ ನನ್ನ ವೃದ್ಯಾಪ್ಯವನ್ನು ಜ್ಞಾಪಿಸಿದರೆ ಜಂತಿಯಲ್ಲಿ ಬಿದ್ದ ತೂತುಗಳು ನನ್ನ ಜೀವನದ ಶೂನ್ಯವನ್ನು ಹೇಳಿದವು. ಕೂಡಲೇ ನನ್ನ ಮನಸ್ಸು ಇದುವರೆಗೂ ನಾನೆಷ್ಟು ಸುಳ್ಳುಗಳನ್ನು ಹೇಳಿದ್ದೇನೆ, ಎಷ್ಟು ಪಾಪಗಳನ್ನು ಮಾಡಿದ್ದೇನೆ, ಎಷ್ಟು ರೋಗಗ್ರಸ್ಥ ದನಗಳನ್ನು ಒಳ್ಳೆ ಬೆಲೆಗೆ ಮಾರಿಸಿದ್ದೇನೆ, ಎಷ್ಟು ಕಟ್ಟುಮಸ್ತಾದ ದನಗಳನ್ನು ಸೊವಿ ಬೆಲೆಗೆ ಮಾರಿಸಿದ್ದೇನೆಂಬುದನ್ನು ಲೆಕ್ಕಹಾಕತೊಡಗಿತು. ಈ ಹೊಟ್ಟೆಗೋಸ್ಕರ ನಾನು ಎಂತೆಂಥ ಪಾಪಗಳನ್ನು ಮಾಡಲಿಲ್ಲ? ಎಷ್ಟೊಂದು ಸುಳ್ಳುಗಳನ್ನು ಹೇಳಲಿಲ್ಲ? ಆದರೂ ಅದಿನ್ನೂ ಖಾಲಿಯಾಗಿಯೇ ಉಳಿದಿದೆ. 

ನಾನಿನ್ನೂ ನನ್ನ ಭೂತದ ಕುರಿತು ಯೋಚಿಸುತ್ತಿದ್ದೆ. ಅಷ್ಟರಲ್ಲಿ ಇದಕ್ಕಿದ್ದಂತೆ ನನ್ನನ್ನು ಭೇಟಿ ಮಾಡಲು ಬಂದ ವ್ಯಕ್ತಿಯೊಬ್ಬ ನನ್ನನ್ನು ವರ್ತಮಾನಕ್ಕೆ ಎಳೆದು ತಂದಿದ್ದ.

“ರಾಮ್-ರಾಮ್, ಸಾ!”

“ರಾಮ್-ರಾಮ್, ಭಾಯಿ!” ನಾನು ಮರು ಶುಭಾಶಯ ಹೇಳಿದೆ.

“ನೀನು ತನ್ಸುಖ್ ಅಲ್ಲವೆ?”

“ಹೌದು”

“ನಂಗೊಂದು ಎಮ್ಮೆಯನ್ನು ಕೊಳ್ಳಬೇಕಾಗಿದೆ” ಅವನು ನನ್ನ ಕಾಲ ಬಳಿ ಹೊರಸಿನ ಮೇಲೆ ಕೂರುತ್ತಾ ಹೇಳಿದ.

ಅವನಿಗೆ ವಯಸ್ಸಾಗಿತ್ತು. ಬಹುಶಃ, ಅರವತ್ತೋ ಅರವತ್ತರ ಮೇಲಾಗಿರಬೇಕು. ಅವನು ಜೀವನದಲ್ಲಿ ತುಂಬಾ ನೊಂದಿದ್ದಾನೆಂದು ಅವನ ಮುಖವೇ ಹೇಳುತ್ತಿತ್ತು. ತಕ್ಷಣ ನನಗೆ ನನ್ನ ಪಾಪಗಳನ್ನೆಲ್ಲಾ ತೊಳೆದುಕೊಳ್ಳಲು ಇದೊಂದು ಒಳ್ಳೆ ಅವಕಾಶವೆಂದೆನಿಸಿತು. ನನ್ನ ಪಾಪಗಳನ್ನೆಲ್ಲಾ ತೊಂದರೆಯಲ್ಲಿರುವ ಈ ಮನುಷ್ಯನಿಗೆ ಒಂದು ಒಳ್ಳೆ ಎಮ್ಮೆಯನ್ನು ಕೊಡಿಸುವದರ ಮೂಲಕ ಪರಿಹರಿಸಿಕೊಳ್ಳೋಣವೆಂದುಕೊಂಡೆ

ಅವನು ನೀರು ಕುಡಿಯುತ್ತಾ “ನಾನು ಹೇಳಿದ್ದು ಗೊತ್ತಾಯ್ತಾ?” ಎಂದು ಮತ್ತೆ ಕೇಳಿದ.
ಹಾ, ಗೊತ್ತಾಯ್ತು. ನಿಂಗೆ ಬೇಕಾಗಿರುವ ಎಮ್ಮೆಯನ್ನು ನೋಡಿದಿಯಾ?”
ಹಾ, ನೋಡಿದ್ದೇನೆ. ನೀನು ವ್ಯಾಪಾರ ಮುಗಿಸಿಕೊಡೊದಾದರೆ........”
ಎಲ್ಲಿದೆ ಅದು?”
ಹೇ........., ಇಲ್ಲೇ ಹತ್ತಿರದಲ್ಲೇ. ನಿಮ್ಮ ಮುಂದಿನ ಬೀದಿಯಲ್ಲಿರೊ ಕಾಶಿ ರಿಗಾರಂದು”
ಕಾಶಿಯ ಹೆಸರು ಕೇಳುತ್ತಿದ್ದಂತೆ ಬಡತನದಲ್ಲಿ ಬೆಂದುಹೋದ ಅವನ ಮನೆ ಹಾಗು ಅವನ ಮುಗ್ಧ ಮುಖ, ಎರಡೂ ಏಕಕಾಲಕ್ಕೆ ನನ್ನ ಕಣ್ಮುಂದೆ ಮಿಂಚಿನಂತೆ ಹಾದು ಹೋದವು. ಅವನ ಹೆಂಡತಿ ಕ್ಯಾನ್ಸರ್ ನಿಂದ ಕುಗ್ಗಿ ಹೋಗಿದ್ದಳು. ಅವಳ ಹಸುಗೂಸುಗಳು ಅವಳ ಮುಖವನ್ನೇ ದಿಗ್ಬ್ರಾಂತಿಯಿಂದ ನೋಡುತ್ತಾ ಅವಳು ಬದುಕುಳಿಯಲೆಂದು ಆಸೆಪಡುತ್ತಿದ್ದವು. ಕಾಶಿ ತನ್ನ ಹೆಂಡತಿಯ ಆಸ್ಪತ್ರೆ ಖರ್ಚನ್ನು ಭರಿಸಲು ಇದ್ದ ಒಂದೇ ಒಂದು ಎಮ್ಮೆಯನ್ನು ಮಾರಬೇಕಾಗಿತ್ತು. ಅವನು ಆಗಾಗ ನನ್ನ ಹತ್ತಿರ ಹೇಳುತ್ತಿದ್ದ “ತನ್ಸುಖ್, ನನ್ನ ಎಮ್ಮೆಯನ್ನು ಮಾರಿಸಿಕೊಡು. ನಿನಗೆ ತಿಳಿದಂತೆ ನನ್ನ ಹೆಂಡತಿ ಆರೈಕೆಗೆ ಉಳಿದಿರುವದು ಇದೊಂದೇ ದಾರಿ. ಡಾಕ್ಟರು ಬೇರೆ ಆಪರೇಶನ್ ಮಾಡಬೇಕು ಅಂತಾ ಹೇಳಿದ್ದಾರೆ. ಈಗ ನನ್ನ ಹತ್ರ ಒಂದು ನಯಾಪೈಸಾ ಇಲ್ಲ. ನೀನು ಹೆಂಗೂ ದಲ್ಲಾಳಿಯಿದ್ದೀ. ನಂಗಿದನ್ನು ಒಳ್ಳೆ ಬೆಲೆಗೆ ಮಾರಿಸಿಕೊಟ್ರೆ ದೊಡ್ಡ ಉಪಕಾರವಾಗುತ್ತೆ. ನಿಂಗೆ ಬೇಕಾದರೆ ಕಮೀಷನ್ನೂ ತಗೋ.”
ಅದೇನು ನಂಗೆ ಅಂಥಾ ಕಷ್ಟದ ಕೆಲಸವೇನಾಗಿರಲಿಲ್ಲ. ಆದರೆ ಆ ಹೆಸರೇ ನನ್ನಮುಂದೆ ಬೇರೊಂದು ಚಿತ್ರಣವನ್ನು ತಂದಿತು-ಅದು ಕಾಶಿಯ ರೋಗಗ್ರಸ್ಥ ಎಮ್ಮೆ. ಅದಕ್ಕೀಗಾಗಲೆ ನಾಲ್ಕು ಸಾರಿ ಹೊಟ್ಟಿ ಹೋಗಿತ್ತು. ಪಶುವೈದ್ಯರು ಅದನ್ನು ಆರೈಕೆ ಮಾಡಿದ್ದರೂ ಅದಕ್ಕೆ ಇನ್ನೊಂದು ಸಾರಿಯೇನಾದರು ಗರ್ಭಪಾತವಾದರೆ ಖಂಡಿತ ಸಾಯುತ್ತದೆಂದು ಎಚ್ಚರಿಕೆ ನೀಡಿದ್ದರು. 
ನಾನು ಈಗ ತೊಂದರೆಯಲ್ಲಿ ಸಿಲುಕಿದ್ದೆ. ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ಸುಮ್ಮನೆ ಯೋಚಿಸುತ್ತಾ ಕುಳಿತೆ. ನಮ್ಮಿಬ್ಬರ ನಡುವೆ ಮೌನ ಆವರಿಸಿತ್ತು.
ಸ್ವಲ್ಪ ಸಮಯದ ಬಳಿಕ ಆ ಮುದಕನೇ ಮೌನವನ್ನು ಮುರಿದನು.
ಏನು ಯೋಚಿಸುತ್ತಿದ್ದೀಯಾ? ನನ್ನ ಬೇಡಿಕೆಯನ್ನು ಈಡೇರಿಸಲು ನಿರ್ಧರಿಸಿದ್ದೀಯಾ?”
ಇಲ್ಲ. ಇನ್ನೂ ಇಲ್ಲ. ಅಂದಹಾಗೆ ಆ ಎಮ್ಮೆ ಕಾಶೀದು ಅಂತ ಹೇಳಿದಿಯಲ್ವಾ?”
ಹೌದು, ಯಾಕಿಷ್ಟೊಂದು ಪೇಚಾಡ್ತಿದ್ದೀಯಾ? ಏನಾದ್ರು ತೊಂದ್ರೆಯಿದಿಯಾ? ಇದ್ರೆ ಬೇಡ. ಮೊದ್ಲೇ ಹೇಳಿ ಕೇಳಿ ನಾನು ಬಡವ ಇದ್ದೀನಿ. ಈಗ್ಲೇ ಇಷ್ಟೊಂದು ಕಷ್ಟ. ಅಂಥಾದ್ದರಲ್ಲಿ ನನ್ನನ್ನು ಇನ್ನೊಂದು ಕಷ್ಟಕ್ಕೆ ಸಿಲುಕಿಸಬೇಡ.. .......ಅದನ್ನ ನನ್ನ ಮಗನಿಗೋಸ್ಕರ ಕೊಳ್ತಾಇದ್ದೀನಿ”
ನಿನ್ನ ಮಗನಿಗೋಸ್ಕರ?”
ಹೌದು, ನನ್ನ ಮಗನಿಗೆ ಹುಷಾರಿಲ್ಲ. ಎರಡು ವರ್ಷದಿಂದ ದವಾಖಾನೆಯಲ್ಲೇ ಇದ್ದ. ನಿನ್ನೆಯಷ್ಟೆ ಮನೆಗೆ ಮರಳಿದ್ದಾನೆ. ಡಾಕ್ಟರು, ಅವನು ದಿನಾಲೂ ಹಾಲು ಕುಡಿಬೇಕು ಅಂತಾ ಹೇಳಿದ್ದಾರೆ. ಅದಕ್ಕೆ ಒಂದು ಎಮ್ಮಿ ಕೊಂಡ್ಕೋಬೇಕು ಅಂತಾ ಬಂದಿದ್ದೇನೆ. ಅದರಿಂದ ಮನೆಗೆ ಆದಾಯವೂ ಬರಬೇಕು, ನನ್ನ 
ಮಗನ ಆರೈಕೆಯೂ ನಡಿಬೇಕು”
ಓ!
ಹೌದು, ತನ್ಸುಖ್. ನಾನು ಹಾಳಾಗದೆ ಇರೋ ತರ ನೋಡಿಕೊ. ಇವಾಗಲೇ ಇಷ್ಟೊಂದು ಕಷ್ಟ. ಅದಕ ಮತ್ತ ಇನ್ನೊಂದು ಕಷ್ಟ ಕೂಡಿಸಬೇಡ” 
ನಿಟ್ಟುಸಿರು ಬಿಡುತ್ತಾ ದಿಗ್ಭ್ರಾಂತನಾಗಿ ಕುಳಿತುಬಿಟ್ಟೆ. ಇಡಿ ಆಕಾಶ ನನ್ನ ಸುತ್ತ ಗಿರಗಿರನೆ ತಿರುಗಿದಂತೆ ಭಾಸವಾಯಿತು. ನನ್ನೆದೆ ಕಂಪಿಸತೊಡಗಿತು. ನನ್ನ ಇಪ್ಪತ್ತು ವರ್ಷದ ದಲ್ಲಾಳಿ ವೃತ್ತಿ ಜೀವನದಲ್ಲಿ ನಾನ್ಯಾವತ್ತೂ ಈ ಪರಿಯ ಸಂದಿಗ್ಧಕ್ಕೆ ಸಿಲುಕಿರಲಿಲ್ಲ.
ಒಂದೇ ಏಟಿಗೆ ಈ ಮುದುಕ ನನ್ನೆಲ್ಲ ಪಾಪಗಳಿಗೆ ಶಿಕ್ಷೆಯಾಗಿ ಅವನ್ನು ತೊಳೆದುಕೊಳ್ಳಲು ಒಂದು ಆಹ್ವಾನವನ್ನಿತ್ತಿದ್ದ.
ಕೂಡಲೇ ಕೈ ಚಾಚುತ್ತಾ ನಿಂತುಕೊಂಡಿರುವ ಎರಡು ಹಸಿದ ಕಂದಮ್ಮಗಳು ಹಾಗೂ ಇನ್ನೇನು ಕೊನೆಯುಸಿರೆಳೆಯುವ ಎರಡು ರೋಗಗ್ರಸ್ಥ ಜೀವಗಳು ನನ್ನ ಕಣ್ಣು ಮುಂದೆ ಬಂದು ನಿಂತವು. ಯಾರನ್ನು ರಕ್ಷಿಸದಿರಲಿ? ಯಾರಿಗೆ ಮೋಸಮಾಡಲಿ, ಕಾಶಿಗಾ ಅಥವಾ ಈ ಮುದಕನಿಗಾ?
ಈ ಪ್ರಶ್ನೆಗಳು ಎವೆಯಿಕ್ಕದೆ ನನ್ನನ್ನೇ ನೋಡುತ್ತಾ ಒಮ್ಮೆ ಕಟುಕಿದವು. ನಾನು ಈ ಮುದಕನಿಗೆ ಈಗ ಏನು ಹೇಳಲಿ- ಹೂಂ ಅಥವಾ ಊಹೂಂ? ಹೂಂ ಎಂದು ಹೇಳಿದರೆ ಆ ಮುದಕನನ್ನು ಕೊಲೆಗೈದಂತೆ. ಊಹೂಂ ಎಂದು ಹೇಳಿದರೆ ಕಾಶಿಯ ಕತೆ ಮುಗಿದಂತೆ.
“ತನ್ಸುಖ್ಜಿ, ಕಾಶಿ ಮನೆಗೆ ಹೊಗೋಣವೆ?” ಆ ಯಜಮಾನ ಮತ್ತೊಮ್ಮೆ ಕೇಳಿದ.
“ಕ್ಷಮಿಸಿ ಯಜಮಾನ್ರೆ. ನಾನು ದಲ್ಲಾಳಿಯಲ್ಲ.” ನನ್ನ ಧ್ವನಿ ಗದ್ಗದಿತವಾಗುತ್ತಿದ್ದುದು ನನಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. “ನಿಮಗೆ ಹೇಗೆ ಬೇಕೋ, ಹಾಗೆ ಮಾಡಿ”
ನಾನು, ಆ ಮುದುಕ ತನ್ನ ಕೋಲಿನ ಸಹಾಯದಿಂದ ನಿಧಾನವಾಗಿ ಮೇಲೆದ್ದು ನಡುಗುವ ಕಾಲುಗಳಲ್ಲಿ ಹೊರಹೋಗುವದನ್ನು ನೋಡಿದೆ. ಇದೀಗ ಹೊರಸಿನ ಮೇಲೆ ಒಬ್ಬನೇ ಕುಳಿತಿದ್ದೆ. ಪುನಃ ಮಲಗಿಕೊಳ್ಳುತ್ತಾ ಮೊದಲಿನಂತೆ ನನ್ನ ಮೇಲ್ಚಾವಣಿಯನ್ನೇ ನೋಡತೊಡಗಿದೆ. ಎಂದಿನಂತೆ ಮೇಲೆ ಗುಬ್ಬಿಗಳು ಕಿಚಪಿಚ ಎನ್ನುತ್ತಾ ತಮ್ಮ ಜಗಳದಲ್ಲಿ ನಿರತವಾಗಿದ್ದವು.

ಮೂಲ ರಾಜಸ್ಥಾನಿ: ರಾಮ್ ಸ್ವರೂಪ್ ಕಿಸನ್

ಇಂಗ್ಲೀಷಿಗೆ: ಗೋವಿಂದ ನಿಹಾಲಣಿ

ಕನ್ನಡಕ್ಕೆ: ಉದಯ್ ಇಟಗಿ 

(1997 ರಲ್ಲಿ ಭಾರತೀಯ ಎಲ್ಲಾ ಭಾಷೆಗಳ ಕಥಾಸ್ಪರ್ಧೆಯಲ್ಲಿ ರಾಜಸ್ಥಾನಿ ಭಾಷೆಯಲ್ಲಿ ಮೊದಲ ಬಹುಮಾನ 
ಪಡೆದ ಕಥೆ)