ಉದಕದೊಳಗೆ ಬೈಚಿಟ್ಟ
ಬೈಕೆಯ ಕಿಚ್ಚಿನಂತೆ ಇದ್ದಿತ್ತು;
ಸಸಿಯೊಳಗಣ
ರಸದ ರುಚಿಯಂತೆ ಇದ್ದಿತ್ತು;
ನನೆಯೊಳಗಣ
ಪರಿಮಳದಂತೆ ಇದ್ದಿತ್ತು;
ಕೂಡಲಸಂಗಮದೇವರ ನಿಲವು
ಕನ್ನೆಯ ಸ್ನೇಹದಂತೆ ಇದ್ದಿತ್ತು.
೨.
ಕಾಳಿಯ ಕಂಕಾಳದಿಂದ ಮುನ್ನ
ತ್ರಿಪುರ ಸಂಹಾರದಿಂದ ಮುನ್ನ
ಹರಿವಿರಿಂಚಿಗಳಿಂದ ಮುನ್ನ
ಉಮೆಯ ಕಲ್ಯಾಣದಿಂದ ಮುನ್ನ
ಮುನ್ನ, ಮುನ್ನ, ಮುನ್ನ,
ಅಂದಂದಿಗೆ ಎಳೆಯ ನೀನು, ಹಳೆಯ ನಾನು
ಮಹಾದಾನಿ ಕೂಡಲಸಂಗಮದೇವ.
೩.
ಅಯ್ಯಾ, ನೀನು ನಿರಾಕಾರವಾದಲ್ಲಿ
ನಾನು ಜ್ಞಾನವೆಂಬ ವಾಹನವಾಗಿದ್ದೆ ಕಾಣಾ.
ಅಯ್ಯಾ, ನೀನು ನಾಂಟ್ಯಕ್ಕೆ ನಿಂದಲ್ಲಿ
ನಾನು ಚೈತನ್ಯವೆಂಬ ವಾಹನವಾಗಿದ್ದೆ ಕಾಣಾ.
ಅಯ್ಯಾ, ನೀನು ಸಾಕಾರವಾಗಿದ್ದಲ್ಲಿ
ನಾನು ವೃಷಭನೆಂಬ ವಾಹನವಾಗಿದ್ದೆ ಕಾಣಾ.
ಅಯ್ಯಾ, ನೀನೆನ್ನ ಭವವ ಕೊಂದಹೆನೆಂದು
ಜಂಗಮಲಾಂಛನವಾಗಿ ಬಂದಲ್ಲಿ
ನಾನು ಭಕ್ತನೆಂಬ ವಾಹನವಾಗಿದ್ದೆ ಕಾಣಾ ಕೂಡಲಸಂಗಮದೇವ.
೪.
ಕರಿ ಘನ, ಅಂಕುಶ ಕಿರಿದೆನ್ನಬಹುದೆ ? ಬಾರದಯ್ಯ!
ಗಿರಿ ಘನ, ವಜ್ರ ಕಿರಿದೆನ್ನಬಹುದೆ ? ಬಾರದಯ್ಯ!
ತಮಂಧ ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ!
ಮರಹು ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ!
ಕೂಡಲಸಂಗಮದೇವ.
೫.
ಸಂಸಾರಸಾಗರದ ತೆರೆ ಕೊಬ್ಬಿ
ಮುಖದ ಮೇಲೆ ಅಲೆವುತ್ತಿದೆ ನೋಡಾ!
ಸಂಸಾರಸಾಗರ ಉರದುದ್ದವೇ ಹೇಳಾ ?
ಸಂಸಾರಸಾಗರ ಕೊರಲುದ್ದವೇ ಹೇಳಾ ?
ಸಂಸಾರಸಾಗರ ಶಿರದುದ್ದವಾದ ಬಳಿಕ ಏನ ಹೇಳುವೆನಯ್ಯ ?
ಅಯ್ಯ; ಅಯ್ಯ, ಎನ್ನ ಹುಯ್ಯಲ ಕೇಳಯ್ಯ!
ಕೂಡಲಸಂಗಮದೇವ, ನಾನೇವೆನೇವೆನಯ್ಯ!
೬.
ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ
ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯ,
ಇಂದೆನ್ನ ದೇಹಕ್ಕೆ ಗ್ರಹಣವಾಯಿತ್ತು.
ಇನ್ನೆಂದಿಂಗೆ ಮೋಕ್ಷವಹುದೋ ?! ಕೂಡಲಸಂಗಮದೇವ.
೭.
ನಾನೊಂದ ನೆನೆದರೆ, ತಾನೊಂದ ನೆನೆವುದು;
ನಾನಿತ್ತಲೆಳೆದರೆ, ತಾನತ್ತಲೆಳೆವುದು;
ತಾ ಬೇರೆ ಎನ್ನನಳಲಿಸಿ ಕಾಡಿತ್ತು;
ತಾ ಬೇರೆ ಎನ್ನ ಬಳಲಿಸಿ ಕಾಡಿತ್ತು;
ಕೂಡಲಸಂಗನ ಕೂಡಿಹೆನೆಂದರೆ
ತಾನೆನ್ನ ಮುಂದುಗೆಡಿಸಿತ್ತು ಮಾಯೆ.
೮.
ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ,
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ,
ಕೂಟಕ್ಕೆ ಸ್ತ್ರಿಯಾಗಿ ಕೂಡಿದಳು ಮಾಯೆ,
ಇದಾವಾವ ಪರಿಯಲ್ಲು ಕಾಡಿತ್ತು ಮಾಯೆ.
ಈ ಮಾಯೆಯ ಕಳೆವಡೆ ಎನ್ನಳವಲ್ಲ
ನೀವೇ ಬಲ್ಲಿರಿ ಕೂಡಲಸಂಗಮದೇವ.
೯.
ಇಂದಿಂಗೆಂತು ನಾಳಿಂಗೆಂತೆಂದು
ಬೆಂದೊಡಲ ಹೊರೆಯ ಹೋಯಿತ್ತೆನ್ನ ಸಂಸಾರ!
ಹಿಂದೆ ನಾನಾ ಯೋನಿಯಲ್ಲಿ ಬಂದೆನೆಂಬ ಹೇಯವಿಲ್ಲ!
ಮುಂದೆ ಮುಕ್ತಿಯಾಗಬೇಕೆಂಬ ಯುಕ್ತಿಯಿಲ್ಲ!
ಎಂದೆಂದೂ ಸದಾಶಿವನ ಕುಂದದೆ ನೆನೆಯಲೀಯದೆ
ಕೊಂದಹುದೀ ಮಾಯೆ ಕೂಡಲಸಂಗಮದೇವ!
೧೦.
ಆಸತ್ತೆನಲಸಿದೆನೆಂದರೆ ಮಾಣದು,
ಬೇಸತ್ತೆ ಬೆಂಬಿದ್ದೆನೆಂದರೆ ಮಾಣದು,
ಏವೆನೇವೆನೆಂದರೆ ಮಾಣದು-
ಕಾಯದ ಕರ್ಮದ ಫಲಭೋಗವು.
ಕೂಡಲಸಂಗನ ಶರಣರು ಬಂದು
"ಹೋ ಹೋ ಅಂಜದಿರಂಜದಿರು" ಎಂದರಾನು ಬದುಕುವೆನು.
೧೧.
ಸಂಸಾರವೆಂಬ ಸರ್ಪ ಮುಟ್ಟಲು
ಪಂಚೇಂದ್ರಿಯವಿಷಯವೆಂಬ
ವಿಷದಿಂದಾನು ಮುಂದುಗೆಟ್ಟೆನಯ್ಯ,
ಆನು ಹೊರಳಿ ಬೀಳುತ್ತಿದ್ದೆನಯ್ಯ;
"ಓಂ ನಮಶ್ಶಿವಾಯ" ಎಂಬ ಮಂತ್ರವ ಜಪಿಸುತ್ತಿದ್ದೆನಯ್ಯ
ಕೂಡಲಸಂಗಮದೇವ.
೧೨.
ಎಂದೋ, ಸಂಸಾರದ ದಂದುಗ ಹಿಂಗುವುದೆನಗೆಂದೋ ?
ಮನದಲ್ಲಿ ಪರಿಣಾಮವಹುದೆನಗಿನ್ನೆಂದೊ ?
ಕೂಡಲಸಂಗಮದೇವಾ ಇನ್ನೆಂದೋ
ಪರಮಸಂತೋಷದಲಿಹುದೆನಗೆಂದೋ ?
೧೩.
ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡು!
ತೇಲಲೀಯದು ಗುಂಡು, ಮುಳುಗಲೀಯದು ಬೆಂಡು!
ಇಂತಪ್ಪ ಸಂಸಾರಶರಧಿಯ ದಾಂಟಿಸಿ
ಕಾಲಾಂತಕನೇ ಕಾಯೋ, ಕೂಡಲಸಂಗಯ್ಯ!
೧೪.
ಲೇಸ ಕಂಡು ಮನ ಬಯಸಿ ಬಯಸಿ
ಆಶೆ ಮಾಡಿದರಿಲ್ಲ ಕಂಡಯ್ಯ.
ತಾಳಮರಕ್ಕೆ ಕೈಯ್ಯ ನೀಡಿ, ಮೇಲ ನೋಡಿ
ಗೋಣು ನೊಂದುದಯ್ಯ.
ಕೂಡಲಸಂಗಮದೇವ ಕೇಳಯ್ಯ
ನೀನೀವ ಕಾಲಕ್ಕಲ್ಲದಿಲ್ಲ ಕಂಡಯ್ಯ.
೧೫.
ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದಯ್ಯ.
ಚಂದ್ರ ಕುಂದೆ ಕುಂದುವುದಯ್ಯ,
ಚಂದ್ರಂಗೆ ರಾಹು ಅಡ್ಡ ಬಂದಲ್ಲಿ
ಅಂಬುಧಿ ಬೊಬ್ಬಿಟ್ಟಿತ್ತೇ ಅಯ್ಯ ?
ಅಂಬುಧಿಯ ಮುನಿ ಆಪೋಶನವ ಕೊಂಡಲ್ಲಿ
ಚಂದ್ರಮನಡ್ಡ ಬಂದನೆ ಅಯ್ಯ ?
ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ
ಜಗದ್ ನಂಟ ನೀನೇ ಅಯ್ಯ ಕೂಡಲಸಂಗಮದೇವ.
೧೬.
ಒಲೆ ಹತ್ತಿ ಉರಿದರೆ ನಿಲ ಬಹುದಲ್ಲದೆ
ಧರೆ ಹತ್ತಿ ಉರಿದರೆ ನಿಲ ಬಾರದು.
ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ
ತಂದೆ ಕೂಡಲಸಂಗಮದೇವ
ನೀ ಹುಟ್ಟಿಸಿ ಜೀವನ ಭವದುಃಖಿಯ ಮಾಡಿದ ಬಳಿಕ.
ಬಿಡಿಸುವರಾರುಂಟು ?
೧೭.
ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯ,
ವಿಚಾರಿಸಿದರೇನು ಹುರುಳಿಲ್ಲವಯ್ಯ.
ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಹುಮಾಡಿ
ನೀವಿರಿಸಿದಿರಯ್ಯ ಕೂಡಲಸಂಗಮದೇವ.
೧೮.
ಮುಂಗಯ್ಯ ಕಂಕಣಕೆ ಕನ್ನಡಿಯ ತೋರುವಂತೆ
ಎನ್ನ ಮನ ನಿಧಾನವನೊಲ್ಲದೆ ಜರಗ ಮೆಚ್ಚಿತ್ತು ನೋಡಾ
ನಾಯಿಗೆ ನಾರಿವಾಣವಕ್ಕುವುದೆ ? ಕೂಡಲಸಂಗಮದೇವ.
೧೯.
ಎನ್ನ ಮನವೆಂಬ ಮರ್ಕಟನು
ತನುವಿಕಾರವೆಂಬ ಅಲ್ಪಸುಖದಾಸೆ ಮಾಡಿ,
ವೃಥಾ ಭ್ರಮಣಗೊಂಡು, ನಾನಾ ದೆಸೆಗೆ ಲಂಘಿಸಿ
ಅಳಲಿಸಿ ಬಳಲಿಸುತ್ತಿದೆ ನೋಡಾ!
ಕೂಡಲಸಂಗಮದೇವರೆಂಬ ವೃಕ್ಷಕ್ಕೆ ಲಂಘಿಸಿ
ಅಪರಿಮಿತ ಸುಖವನೆಯ್ದದು ನೋಡಾ!
೨೦.
ಕೊಂಬೆಯ ಮೇಲಣ ಮರ್ಕಟನಂತೆ
ಲಂಘಿಸುವುದೆನ್ನ ಮನವು
ನಿಂದಲ್ಲಿ ನಿಲಲೀಯದೆನ್ನ ಮನವು
ಹೊಂದಿದಲ್ಲಿ ಹೊಂದಲೀಯದೆನ್ನ ಮನವು
ಕೂಡಲಸಂಗಮದೇವಾ
ನಿಮ್ಮ ಚರಣ ಕಮಲದಲ್ಲಿ ಭ್ರಮರನಾಗಿರಿಸು ನಿಮ್ಮ ಧರ್ಮ.
೨೧.
ಅಂದಣವನೇರಿದ ಸೊಣಗನಂತೆ
ಕಂಡರೆ ಬಿಡದು ತನ್ನ ಮುನ್ನಿನ ಸ್ವಭಾವವನು
ಸುಡು, ಸುಡು; ಮನವಿದು ವಿಷಯಕ್ಕೆ ಹರಿವುದು,
ಮೃಡ, ನಿಮ್ಮನನುದಿನ ನೆನೆಯಲೀಯದು.
ಎನ್ನೊಡೆಯನೇ, ಕೂಡಲಸಂಗಮದೇವ,
ನಿಮ್ಮ ಚರಣವ ನೆನೆವಂತೆ ಕರುಣಿಸು,
ಸೆರಗೊಡ್ಡಿ ಬೇಡುವೆ ನಿಮ್ಮ ಧರ್ಮ.